ಎನ್ಎಂಸಿ ಲಾಂಛನ ಬದಲಾವಣೆ ಸಮರ್ಥಿಸಿಕೊಂಡ ಕೇಂದ್ರ

Update: 2023-12-11 16:45 GMT

ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ ಜಾತ್ಯತೀತ ಲಾಂಛನವನ್ನು ಹಿಂದೂ ಪುರಾಣದ ದೇವರುಗಳ ವೈದ್ಯ ಧನ್ವಂತರಿಯನ್ನು ಒಳಗೊಂಡ ಲಾಂಛನವನ್ನಾಗಿ ಪರಿವರ್ತಿಸಿರುವುದನ್ನು ಕೇಂದ್ರ ಸರಕಾರ ಸೋಮವಾರ ಸಮರ್ಥಿಸಿಕೊಂಡಿದೆ.

ಅಲ್ಲದೆ, ಇದು ಭಾರತದ ಪರಂಪರೆಯ ಭಾಗವಾಗಿದೆ. ಪ್ರತಿಯೊಬ್ಬರೂ ಅದರ ಬಗ್ಗೆ ಹೆಮ್ಮೆ ಪಡೆಬೇಕು ಎಂದು ಅದು ಹೇಳಿದೆ.

ರಾಜ್ಯಸಭೆಯಯ ಶೂನ್ಯ ವೇಳೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಲಾಂಛನವನ್ನು ಬದಲಾಯಿಸಿದ ವಿಷಯದ ಕುರಿತು ಪ್ರಶ್ನೆ ಎತ್ತಿದ ಟಿಎಂಸಿಯ ಶಂತನು ಸೇನ್, ರಾಷ್ಟ್ರೀಯ ವೈದ್ಯಕೀಯ ಆಯೋಗದ ಈ ಹಿಂದಿನ ಲಾಂಛನವನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿದರು.

ಸಮಾಜದ ವಿವಿಧೆಡೆಗಳ ಹಾಗೂ ವೈದ್ಯಕೀಯ ಸಮುದಾಯಗಳ ಆಕ್ಷೇಪಗಳ ಹೊರತಾಗಿಯೂ 1956ರ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯನ್ನು 2020ರಲ್ಲಿ ರದ್ದುಗೊಳಿಸಲಾಗಿತ್ತು. 64 ವರ್ಷ ಹಳೆಯ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ-1956 ಅನ್ನು ರದ್ದುಗೊಳಿಸಿ 2020 ಸೆಪ್ಟಂಬರ್ 25ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೆ ತರಲಾಯಿತು ಎಂದು ಅವರು ಹೇಳಿದರು.

ಈ ಹಿಂದೆ ಇದನ್ನು ‘ಪಶ್ಚಿಮದ ಔಷಧಿ’ ಎಂದು ವ್ಯಾಖ್ಯಾನಿಸಲಾಗಿತ್ತು. ಅನಂತರ ‘‘ಔಷಧಿ’’ ಎಂದು ಕರೆಯಲಾಯಿತು. ಅಂತಿಮವಾಗಿ ‘ಆಧುನಿಕ ಔಷಧಿ’ ಎಂದು ವ್ಯಾಖ್ಯಾನಿಸಲಾಯಿತು ಹಾಗೂ ‘ಆಧುನಿಕ ಔಷಧಿ’ಯ ಲಾಂಛನವಾಗಿ ಈಸ್ಕಿಪಸ್ ನ ಸಿಬ್ಬಂದಿಯ ಚಿತ್ರವನ್ನು ಸೇರಿಸಲಾಯಿತು ಎಂದು ಅವರು ಹೇಳಿದರು.

ಆದರೆ, ದುರಾದೃಷ್ಟವೆಂದರೆ ಇತ್ತೀಚೆಗಿನ ದಿನಗಳಲ್ಲಿ ನಾವು ಬದಲಾದ ಲಾಂಛನವನ್ನು ನೋಡುತ್ತಿದ್ದೇವೆ. ಇದು ಸರಕಾರದ ಸೂಚನೆಯೇ ಅಥವಾ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ವ ನಿರ್ಧಾರವೇ ಎಂಬುದು ನನಗೆ ತಿಳಿಸಿದಿಲ್ಲ. ಆದರೆ, ಅವರು ಲಾಂಛನವನ್ನು ಬದಲಾಯಿಸಿದ್ದಾರೆ ಹಾಗೂ ಲಾಂಛನದಲ್ಲಿ ಧನ್ವಂತರಿಯ ಚಿತ್ರವನ್ನು ಸೇರಿದ್ದಾರೆ. ಲಾಂಛನದ ಬದಲಾವಣೆ ಖಂಡಿತವಾಗಿ ಅಗತ್ಯ ಇಲ್ಲ. ಇದು ನಿರ್ಧಿಷ್ಟ ಧರ್ಮದ ಲಾಂಛನ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವಿಯ, ‘‘ಇದು ಈಗಾಗಲೇ ಆಯೋಗದ ಲಾಂಛನದ ಭಾಗವಾಗಿದೆ. ಕೇವಲ ಕೆಲವು ಬಣ್ಣಗಳನ್ನು ಮಾತ್ರ ಸೇರಿಸಲಾಗಿದೆ. ಬೇರೆ ಯಾವುದೇ ಬದಲಾವಣೆ ಮಾಡಿಲ್ಲ’’ ಎಂದು ಅವರು ಹೇಳಿದರು. ‘‘ಇದು ಭಾರತದ ಪರಂಪರೆ. ನಾವು ಅದರ ಬಗ್ಗೆ ಹೆಮ್ಮೆ ಪಡೆಬೇಕು ಎಂದು ನಾನು ಭಾವಿಸುತ್ತೇನೆ. ದೇಶದ ಪರಂಪರೆಯಿಂದ ಪ್ರೇರಣೆ ಪಡೆದುಕೊಂಡು ಈ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

‘‘ಈ ಲಾಂಛನ ವೈದ್ಯಕೀಯ ವಿಜ್ಞಾನಕ್ಕೆ ಉತ್ತಮ ಕೊಡುಗೆ ನೀಡಿದ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ನಾವು ಇತರ ಯಾವುದೇ ಉದ್ದೇಶ ಇಲ್ಲದೆ ಅವರ ಫೋಟೊ ಬಳಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News