ಹಾಕಿ ಆಡಳಿತದಲ್ಲಿ ವಿಭಜನೆಯಿಲ್ಲ : ಹಾಕಿ ಇಂಡಿಯಾ ಅಧಕ್ಷ, ಮಹಾ ಕಾರ್ಯದರ್ಶಿಯ ಜಂಟಿ ಹೇಳಿಕೆ
ಹೊಸದಿಲ್ಲಿ : ರಾಜೀನಾಮೆ ನೀಡಿರುವ ಹಾಕಿ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೀನಾ ನೋರ್ಮನ್ ಮತ್ತು ಮಹಿಳಾ ಹಾಕಿ ತಂಡದ ಪ್ರಧಾನ ಕೋಚ್ ಜಾನೆಕ್ ಶೋಪ್‌ಮನ್ ಇತ್ತೀಚೆಗೆ ನೀಡಿರುವ ಹೇಳಿಕೆಗಳು ಸರಿಯಿಲ್ಲ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ತಿರ್ಕೆ ಮತ್ತು ಮಹಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಬುಧವಾರ ಜಂಟಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಹಾಕಿ ಇಂಡಿಯಾದಲ್ಲಿ ಎರಡು ಬಣಗಳಿವೆ ಎಂದು 13 ವರ್ಷ ಸಿಇಒ ಆಗಿದ್ದ ನೋರ್ಮನ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ಅಲ್ಲಿನ ಕೆಲಸದ ವಾತಾವರಣ ದಿನಗಳೆದಂತೆ ಹದಗೆಡುತ್ತಿದೆ ಎಂಬುದಾಗಿಯೂ ಹೇಳಿದ್ದರು.
ಈ ಹೇಳಿಕೆಗಳನ್ನು ಹಾಕಿ ಇಂಡಿಯಾವು ತನ್ನ ಹೇಳಿಕೆಯಲ್ಲಿ ನಿರಾಕರಿಸಿದೆ. ‘‘ನಿರ್ಗಮನ ಅಧಿಕಾರಿಗಳು ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿದ್ದಾರೆ. ಸಂಘಟನೆಯು ವಿಭಜನೆಯಾಗಿದೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ. ನಾವು ಕೆಲಸದಲ್ಲಿ ಜೊತೆಯಾಗಿದ್ದೇವೆ ಮತ್ತು ಒಗ್ಗಟ್ಟಿನಿಂದ ಇದ್ದೇವೆ. ಕ್ರೀಡೆಯ ಅತ್ಯುನ್ನತ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡುತ್ತಾ ಇದ್ದೇವೆ’’ ಎಂದು ಜಂಟಿ ಹೇಳಿಕೆಯಲ್ಲಿ ತಿರ್ಕೆ ಮತ್ತು ಭೋಲಾನಾಥ್ ಸಿಂಗ್ ಹೇಳಿದ್ದಾರೆ.