ಕೋಲ್ಕತ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ; ಸಂಜಯ್ ರಾಯ್ ಒಬ್ಬನೇ ಆರೋಪಿ : ಸಿಬಿಐ ವರದಿ?
ಹೊಸದಿಲ್ಲಿ : ಕೋಲ್ಕತದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಲಿಕಾ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತಳ್ಳಿಹಾಕಿದೆ ಎಂದು NDTV ವರದಿ ಮಾಡಿದೆ. ಭೀಕರ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ಏಕೈಕ ಆರೋಪಿಯಾಗಿದ್ದಾನೆ ಎಂದು ಅದು ಹೇಳಿದೆ.
ಲಭ್ಯವಿರುವ ಪುರಾವೆಗಳ ಪ್ರಕಾರ, ಈಗಾಗಲೇ ಬಂಧಿಸಲ್ಪಟ್ಟಿರುವ ಸಂಜಯ್ ರಾಯ್ ಮಾತ್ರ ಆರೋಪಿಯಾಗಿದ್ದಾನೆ ಮತ್ತು ತನಿಖೆ ಈಗ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ. ಆರೋಪಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧತೆ ನಡೆಸುತ್ತಿದೆ ಎಂದು ಅದು ಹೇಳಿದೆ.
ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರಿಂದ ಸಿಬಿಐ ವಹಿಸಿಕೊಂಡಿತ್ತು. ಸಿಬಿಐ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದಾಗಿ ಕಳೆದ ವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
‘‘ಅವರಿಗೆ ನ್ಯಾಯ ಬೇಕಾಗಿಲ್ಲ. ಅವರು ಇದನ್ನು ವಿಳಂಬಿಸಲು ಬಯಸುತ್ತಿದ್ದಾರೆ. ಈಗಾಗಲೇ 16 ದಿನಗಳು ಕಳೆದಿವೆ. ಎಲ್ಲಿದೆ ನ್ಯಾಯ?’’ ಎಂದು ಅವರು ಪ್ರಶ್ನಿಸಿದ್ದರು.
ತನಿಖೆಯಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಸಿಬಿಐ ಮಾಹಿತಿ ನೀಡುತ್ತಿಲ್ಲ, ಆದರೆ ಈ ಪ್ರಕರಣದಲ್ಲಿ, ಕೋಲ್ಕತ ಪೊಲೀಸರು ಬೆಳವಣಿಗೆಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದರು ಎಂದು ರಾಜ್ಯ ಸಚಿವ ಬ್ರತ್ಯ ಬಸು ಹೇಳಿದ್ದರು.
ಸಿಬಿಐಯು ವೈದ್ಯಕೀಯ ವರದಿಯನ್ನು ಆರೋಪಿಯ ಡಿಎನ್ಎಯೊಂದಿಗೆ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ವಿಶ್ಲೇಷಣೆಗಾಗಿ ಕಳುಹಿಸಿತ್ತು. ಫಲಿತಾಂಶ ಬಂದ ಬಳಿಕ, ಸಿಬಿಐಯು ತನ್ನ ವರದಿಯನ್ನು ಅಂತಿಮಗೊಳಿಸಲಿದೆ ಎಂದು ಎನ್ಡಿಟಿವಿ ಹೇಳಿದೆ.
ಆಗಸ್ಟ್ 9ರಂದು ನಡೆದ ಕಲಿಕಾ ವೈದ್ಯೆಯ ಭೀಕರ ಅತ್ಯಾಚಾರ-ಕೊಲೆಯಲ್ಲಿ ಸಂಜಯ್ ರಾಯ್ ಹೊರತುಪಡಿಸಿದ ಬೇರೆ ಯಾರೂ ಶಾಮೀಲಾಗಿಲ್ಲ ಎಂಬ ನಿರ್ಧಾರಕ್ಕೂ ಸಿಬಿಯ ಬಂದಿದೆ ಎನ್ನಲಾಗಿದೆ.
ಸಿಬಿಐ ಈವರೆಗೆ 100ಕ್ಕೂ ಅಧಿಕ ಹೇಳಿಕೆಗಳನ್ನು ದಾಖಲಿಸಿದೆ ಮತ್ತು 10 ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸಿದೆ.