4ನೇ ತಲೆಮಾರು ಬಂದರೂ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲವೆಂದು ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು: ಅಮಿತ್ ಶಾ
ಹೊಸದಿಲ್ಲಿ: “ನಿಮ್ಮ ನಾಲ್ಕನೇ ತಲೆಮಾರು ಬಂದರೂ ಮುಸ್ಲಿಮರಿಗೆ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಿಟ್ಟ ಮೀಸಲಾತಿಯನ್ನು ಕಸಿದು ನೀಡಲು ಸಾಧ್ಯವಿಲ್ಲ" ಎನ್ನುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಕೆಲವು ದಿನಗಳ ಹಿಂದೆ, ಉಲಮಾಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ, ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಕಡಿತಗೊಳಿಸಬೇಕಾಗುತ್ತದೆ. ರಾಹುಲ್ ಬಾಬಾ, ನೀವು ಮಾತ್ರವಲ್ಲ, ನಿಮ್ಮ ನಾಲ್ಕು ತಲೆಮಾರುಗಳು ಬಂದರೂ, ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾದ ಕೋಟಾವನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಏನೇ ಆದ್ರೂ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವುದಿಲ್ಲ. ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿದರೂ, 370ನೇ ವಿಧಿ ಮರುಸ್ಥಾಪಿಸಲಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರಾಗಿದ್ದಾಗ ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಯಭೀತನಾಗಿದ್ದೆ ಎಂದು ಕಾಂಗ್ರೆಸ್ ಮುಖಂಡ ಸುಶೀಲ್‌ಕುಮಾರ್ ಶಿಂಧೆ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅಮಿತ್ ಶಾ, ಶಿಂಧೇ ಜೀ, ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಹೋಗಿ, ನಿಮಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿನ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಒಕ್ಕೂಟವನ್ನು ಔರಂಗಜೇಬ್ ಅಭಿಮಾನಿಗಳ ಸಂಘ ಎಂದು ಹೇಳಿದ ಅಮಿತ್ ಶಾ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಶಿವಾಜಿ ಮಹಾರಾಜ್ ಮತ್ತು ಸಾವರ್ಕರ್ ಅವರ ಆದರ್ಶಗಳಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಉದ್ಧವ್ ಜಿ ಅಧಿಕಾರಕ್ಕಾಗಿ ಬಾಳಾಸಾಹೇಬ್ ಠಾಕ್ರೆಯವರ ತತ್ವಗಳನ್ನು ಮರೆತಿದ್ದಾರೆ. ಉದ್ಧವ್ ಬಾಬು, ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣವನ್ನು ವಿರೋಧಿಸಿದವರು, ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದವರು, ತ್ರಿವಳಿ ತಲಾಖ್ ರದ್ದತಿಯನ್ನು ವಿರೋಧಿಸಿದವರು, ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿದವರು, ಸರ್ಜಿಕಲ್ ಸ್ಟ್ರೈಕ್‌ಗಳನ್ನು ವಿರೋಧಿಸಿದವರು ಮತ್ತು ಹಿಂದೂಗಳನ್ನು ಭಯೋತ್ಪಾದಕರು ಎಂದು ಕರೆಯುವವರ ಜೊತೆ ನೀವು ಕುಳಿತಿದ್ದೀರಿ ಎಂದು ಅಮಿತ್ ಶಾ ಹೇಳಿದ್ದಾರೆ.