"ಯಾರೂ ಅವರನ್ನು ಮುಟ್ಟಲು ಸಾಧ್ಯವಿಲ್ಲ": ಹಿಸಾರ್‌ ಖಾಪ್‌ ಸಭೆಯಲ್ಲಿ ಮುಸ್ಲಿಮರಿಗೆ ಬೆಂಬಲ ವ್ಯಕ್ತಪಡಿಸಿದ ರೈತರು

Update: 2023-08-10 15:34 GMT

Photo: indianexpress.com

ಹೊಸದಿಲ್ಲಿ: ಹಿಸಾರ್‌ನ ಬಾಸ್‌ ಗ್ರಾಮದಲ್ಲಿ ಬುಧವಾರ ಸಭೆ ಸೇರಿದ ರೈತ ಸಂಘಟನೆಗಳ ಮತ್ತು ಖಾಪ್‌ ಪಂಚಾಯತ್‌ಗಳ ಪ್ರಮುಖರು, ತಾವು ಮುಸ್ಲಿಂ ಸಮುದಾಯದವರಿಗೆ ತೊಂದರೆ ನೀಡಲು ಯಾರಿಗೂ ಅನುಮತಿಸುವುದಿಲ್ಲ ಎಂದು ಘೋಷಿಸಿದ್ದಾರೆ. ನೂಹ್‌ ಹಿಂಸಾಚಾರದ ನಂತರದ ಸಭೆಯಲ್ಲಿ ಈ ಪ್ರಮುಖ ಘೋಷಣೆ ಮಾಡಲಾಗಿದೆ ಎಂದು indianexpress.com ವರದಿ ಮಾಡಿದೆ.

ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ಈ ಸಭೆಯನ್ನು ನಡೆಸಲಾಗಿತ್ತು.

ಹಿಂದು, ಮುಸ್ಲಿಂ ಮತ್ತು ಸಿಖ್‌ ಸಮುದಾಯಗಳ ಸುಮಾರು 2,000 ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

“ಮುಸ್ಲಿಮರು ಇಲ್ಲಿದ್ದಾರೆ. ಯಾರೂ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಅವರ ರಕ್ಷಣೆಯ ಜವಾಬ್ದಾರಿ ಎಲ್ಲಾ ಖಾಪ್‌ಗಳ ಮೇಲಿದೆ,” ಎಂದು ರೈತ ಮುಖಂಡ ಸುರೇಶ್‌ ಕೊಥ್‌ ಹೇಳಿದರು. ಸುರೇಶ್‌ ಅವರು ಕೃಷಿ ಕಾನೂನುಗಳ ವಿರುದ್ಧದ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಮುಖರಲ್ಲಿ ಒಬ್ಬರಾಗಿದ್ದರು.

ನೂಹ್‌ನಲ್ಲಿ ಶಾಂತಿ ಸ್ಥಾಪನೆಗೂ ಶ್ರಮಿಸುವುದಾಗಿ ಬುಧವಾರದ ಪಂಚಾಯತ್‌ನಲ್ಲಿ ರೈತರು ಹೇಳಿದರಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಿ ಜನರನ್ನು ಪ್ರಚೋದಿಸಿದವರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹರ್ಯಾಣಾದಲ್ಲಿ ಕೋಮು ಸೌಹಾರ್ದತೆಗೆ ಶ್ರಮಿಸಲು ರೈತ ನಾಯಕರು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ಜಿಂದ್‌ ಪಟ್ಟಾಣದಲ್ಲಿ ಅವರು ಮೆರವಣಿಗೆ ನಡೆಸಿ “ಹಿಂದು-ಮುಸ್ಲಿಂ-ಸಿಖ್‌, ಇಸಾಯಿ” ಘೋಷಣೆಗಳನ್ನು ಮೊಳಗಿಸಿದರು.

ಕಳೆದ ಶನಿವಾರ ಕೂಡ ಜಿಂದ್‌ನ ಉಚನ ಪಟ್ಟಣದಲ್ಲಿ ಸರ್ವ ಧರ್ಮ ಸಮ್ಮೇಳನ ಆಯೋಜಿಸಲಾಗಿತ್ತು ಹಾಗೂ ಸರ್ವ ಧರ್ಮೀಯರ ನಡುವೆ ಏಕತೆಗೆ ಶ್ರಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News