ನೂಹ್ ಹಿಂಸಾಚಾರ: ಉದ್ರಿಕ್ತ ಗುಂಪಿನ ನಡುವೆ ಸಿಲುಕಿದ್ದ ನ್ಯಾಯಾಧೀಶೆ, ಪುತ್ರಿ ಕೂದಲೆಳೆಯ ಅಂತರದಿಂದ ಪಾರು

Update: 2023-08-03 16:30 GMT

Photo: @panditjipranam/Twitter screengrab

ನೂಹ್ (ಹರ್ಯಾಣ): ಹಿಂಸಾಚಾರದಿಂದ ತತ್ತರಿಸಿರುವ ನೂಹ್‌ನಲ್ಲಿ ಸೋಮವಾರ ಉದ್ರಿಕ್ತ ಗುಂಪಿನ ನಡುವೆ ಸಿಕ್ಕಿಹಾಕಿಕೊಂಡಿದ್ದ ನ್ಯಾಯಾಧೀಶೆ,ಅವರ ಮೂರು ವರ್ಷದ ಪುತ್ರಿ, ಓರ್ವ ಭದ್ರತಾ ಸಿಬ್ಬಂದಿ ಮತ್ತು ಜಿಲ್ಲಾ ನ್ಯಾಯಾಲಯದ ಅಧಿಕಾರಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.

ಸೋಮವಾರ ನೂಹ್‌ನಲ್ಲಿ ಬಜರಂಗ ದಳ ಮತ್ತು ವಿಹಿಂಪ ಆಯೋಜಿಸಿದ್ದ ಶೋಭಾ ಯಾತ್ರೆಯ ಸಂದರ್ಭದಲ್ಲಿ ಘರ್ಷಣೆಗಳು ನಡೆದಿದ್ದು, ಕೋಮು ಹಿಂಸಾಚಾರ ಗುರುಗ್ರಾಮ ಸೇರಿದಂತೆ ಇತರ ಸ್ಥಳಗಳಿಗೂ ಹರಡಿತ್ತು. ಆರು ಜನರು ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ.

ತಾನು ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಂಜಲಿ ಜೈನ್,ಅವರ ಪುತ್ರಿ,ಭದ್ರತಾ ಸಿಬ್ಬಂದಿ ಸಿಯಾರಾಮ್ ಜೊತೆ ನಲಹಾರ್‌ನ ಶಹೀದ್ ಹಸನ್ ಖಾನ್ ಮೇವಾತಿ ಸರಕಾರಿ ಮೆಡಿಕಲ್ ಕಾಲೇಜಿನಿಂದ ವಾಪಸಾಗುತ್ತಿದ್ದಾಗ ನೂಹ್‌ನ ದಿಲ್ಲಿ-ಆಲ್ವಾರ್ ರಸ್ತೆಯಲ್ಲಿ 100-150 ಜನರ ಗುಂಪು ವಾಹನಗಳಿಗೆ ಬೆಂಕಿ ಹಚ್ಚುತ್ತಿತ್ತು ಮತ್ತು ಕಲ್ಲು ತೂರಾಟ ನಡೆಸುತ್ತಿತ್ತು. ಏಕಾಏಕಿ ಕಲ್ಲೊಂದು ಕಾರಿನ ಹಿಂದಿನ ಗಾಜಿಗೆ ಬಡಿದಿತ್ತು ಮತ್ತು ಗಲಭೆಕೋರರು ಗುಂಡುಗಳನ್ನೂ ಹಾರಿಸಿದ್ದರು.

ಅದು ಇನ್ನಷ್ಟು ಭಯಾನಕವಾಗಿತ್ತು ಎಂದು ತಿಳಿಸಿದ ನ್ಯಾಯಾಲಯದ ಅಧಿಕಾರಿ ಟೇಕ್‌ಚಂದ್ (48),‘ಪರಿಸ್ಥಿತಿಯು ತುಂಬ ಉದ್ವಿಗ್ನವಾಗಿತ್ತು. ನಾವು ನಮ್ಮ ಜೀವಗಳಿಗೆ ಹೆದರಿಕೊಂಡಿದ್ದೆವು. ನಮ್ಮ ಜೊತೆ ಸಣ್ಣ ಮಗುವಿತ್ತು. ಏನು ಬೇಕಾದರೂ ಸಂಭವಿಸಬಹುದಿತ್ತು. ಎಲ್ಲೆಡೆ ಬೆಂಕಿಯ ಜ್ವಾಲೆಗಳು ಹರಡಿದ್ದವು,ವಾಹನಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು. ನಾವು ಕಾರನ್ನು ತೊರೆದು ರಸ್ತೆ ಪಕ್ಕದಲ್ಲಿಯ ಹರ್ಯಾಣ ರೋಡ್‌ವೇಸ್‌ನ ವರ್ಕ್‌ಶಾಪ್‌ನಲ್ಲಿ ಅಡಗಿದ್ದೆವು.

ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿದಾಗ ನಾವು ಸ್ಥಳೀಯ ವಕೀಲರಿಗೆ ಮಾಹಿತಿ ನೀಡಿದ್ದೆವು ಮತ್ತು ಅವರು ಬಂದು ನಮ್ಮನ್ನು ರಕ್ಷಿಸಿದರು. ನಾವು ವಾಪಸಾದಾಗ ನ್ಯಾ.ಜೈನ್ ಅವರ ಖಾಸಗಿ ಕಾರು ಗುರುತಿಸಲು ಸಾಧ್ಯವಿಲ್ಲದಷ್ಟು ಸುಟ್ಟು ಹೋಗಿತ್ತು ’ ಎಂದು ತಿಳಿಸಿದರು.

ನ್ಯಾ.ಜೈನ್ ಮಂಗಳವಾರ ದೂರು ಸಲ್ಲಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಲಿಸರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News