ನೂಹ್: ಸೋಮವಾರ ಹಿಂದುತ್ವ ಸಂಘಟನೆಗಳಿಂದ ಶೋಭಾಯಾತ್ರೆ, ಬಿಗಿ ಭದ್ರತೆ
ನುಹ್: ಅಧಿಕಾರಿಗಳು ಅನುಮತಿಯನ್ನು ನಿರಾಕರಿಸಿದ್ದರೂ ಸರ್ವ ಜಾತೀಯ ಮಹಾಪಂಚಾಯತ್ ಸೋಮವಾರ ಬೃಜ್ಮಂಡಲ್ ಶೋಭಾಯಾತ್ರೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹರ್ಯಾಣದ ನುಹ್ ಪಟ್ಟಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.
ಕಟ್ಟೆಚ್ಚರವನ್ನು ವಹಿಸಲು ಅರೆ ಸೇನಾಪಡೆಗಳು ಸೇರಿದಂತೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಂತರ್ರಾಜ್ಯ ಮತ್ತು ಅಂತರ್ಜಿಲ್ಲಾ ಗಡಿಗಳಲ್ಲಿಯೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ನೂಹ್ ನಲ್ಲಿ ಸೆ.3ರಿಂದ 7ರವರೆಗೆ ಜಿ20 ಶೆರ್ಪಾ ಗ್ರುಪ್ ಸಭೆ ನಡೆಯಲಿರುವುದರಿಂದ ಹಾಗೂ ಜು.31ರ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಆಡಳಿತವು ಶೋಭಾಯಾತ್ರೆಗೆ ಅನುಮತಿಯನ್ನು ನಿರಾಕರಿಸಿದೆ ಎಂದು ಹರ್ಯಾಣ ಡಿಜಿಪಿ ಶತ್ರುಜಿತ ಕಪೂರ್ ಶನಿವಾರ ತಿಳಿಸಿದ್ದರು.
ಶೋಭಾಯಾತ್ರೆಗೆ ಮುನ್ನ ಅಥವಾ ಶೋಭಾಯಾತ್ರೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳ ಹರಡುವಿಕೆಯ ಆತಂಕದಿಂದ ಸರಕಾರವು ಆ.26ರಿಂದ 28ರವರೆಗೆ ಮೊಬೈಲ್ ಅಂತರ್ಜಾಲವನ್ನು ನಿಷೇಧಿಸಿದೆ.
ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಮಮತಾ ಸಿಂಗ್ ರವಿವಾರ ತಿಳಿಸಿದರು.
1,900 ಹರ್ಯಾಣ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಅರೆ ಮಿಲಿಟರಿ ಪಡೆಗಳ 24 ಕಂಪನಿಗಳನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಹೊರಗಿನ ವ್ಯಕ್ತಿಗಳು ನೂಹ್ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ. ಮಲ್ಹಾರ್ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನೂ ಮುಚ್ಚಲಾಗಿದೆ. ಆದರೆ ಕೆಎಂಪಿ ಎಕ್ಸ್ಪ್ರೆಸ್ವೇ ಮತ್ತು ದಿಲ್ಲಿ-ಮುಂಬೈ ಎಕ್ಸ್ಪ್ರೆಸ್ವೇಗಳಲ್ಲಿ ವಾಹನ ಸಂಚಾರ ಮುಂದುವರಿಯಲಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದರು.
ನೂಹ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ರವಿವಾರ ಶಾಂತಿ ಸಮಿತಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳನ್ನು ಮುಚ್ಚುವಂತೆ ಜಿಲ್ಲಾಡಳಿತವು ಆದೇಶಿಸಿದೆ. ಪಟ್ಟಣದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಜು.31ರಂದು ವಿಹಿಂಪ ಆಯೋಜಿಸಿದ್ದ ಶೋಭಾಯಾತ್ರೆ ಸಂದರ್ಭದಲ್ಲಿ ನೂಹ್ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿ ಭುಗಿಲೆದ್ದಿದ್ದ ಕೋಮು ಘರ್ಷಣೆಗಳಿಗೆ ಇಬ್ಬರು ಗೃಹರಕ್ಷಕರು ಮತ್ತು ಓರ್ವ ಮೌಲ್ವಿ ಸೇರಿದಂತೆ ಆರು ಜನರು ಬಲಿಯಾಗಿದ್ದರು.