ಉತ್ತರ ಪ್ರದೇಶ, ಬಿಹಾರದ ಹಿಂದಿ ಭಾಷಿಕರು ತಮಿಳುನಾಡಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಾರೆ: ವಿವಾದ ಸೃಷ್ಟಿಸಿದ ಡಿಎಂಕೆ ಸಂಸದರ ಹೇಳಿಕೆ
ಚೆನ್ನೈ: ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ನಿರ್ಮಾಣ ಕಾಮಗಾರಿ ಅಥವಾ ರಸ್ತೆ ಮತ್ತು ಶೌಚಾಲಯಗಳ ಶುಚಿತ್ವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಡಿಎಂಕೆ ಸಂಸದ ದಯಾನಿಧಿ ಮಾರನ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಡಿಎಂಕೆ ಸಂಸದರ ಈ ಹೇಳಿಕೆಯ ವೈರಲ್ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ, ಡಿಎಂಕೆ ಸಂಸದರ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸದ ಈ ಎರಡು ರಾಜ್ಯಗಳ INDIA ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಆ ವಿಡಿಯೊ ತುಣುಕಿನಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷಿಕರ ನಡುವೆ ಹೋಲಿಕೆ ಮಾಡಿರುವ ಮಾರನ್, ಇಂಗ್ಲಿಷ್ ಕಲಿಯುವವರು ಐಟಿ ಉದ್ಯಮಗಳಲ್ಲಿ ಉದ್ಯೋಗ ಪಡೆದರೆ, ಹಿಂದಿ ಭಾಷಿಕರು ಕೆಳ ಮಟ್ಟದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಹೇಳುತ್ತಿರುವುದು ಸೆರೆಯಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಶೆಹಝಾದ್ ಪೂನಾವಾಲಾ, INDIA ಮೈತ್ರಿಕೂಟವು ದೇಶವನ್ನು ಜಾತಿ, ಭಾಷೆ ಹಾಗೂ ಧರ್ಮದ ಆಧಾರದಲ್ಲಿ ವಿಭಾಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದು, ಡಿಎಂಕೆ ಸಂಸದರ ವಿರುದ್ಧದ ಮೈತ್ರಿಕೂಟದ ನಿಷ್ಕ್ರಿಯತೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮತ್ತೊಮ್ಮೆ ಒಡೆದಾಳುವ ನೀತಿಯ ಪ್ರಯತ್ನ ನಡೆಯುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ದಯಾನಿಧಿ ಮಾರನ್ ಬಳಸಿರುವ ಮಾತುಗಳು ದುರದೃಷ್ಟಕರ ಎಂದು ಬಣ್ಣಿಸಿರುವ ಬಿಜೆಪಿ ನಾಯಕ ಶೆಹಝಾದ್ ಪೂನಾವಾಲಾ, ಇತರ ನಾಯಕರ ನಿಷ್ಕ್ರಿಯತೆಯನ್ನು ಗಮನಿಸಿದರೆ ಇದು ಕಾಕತಾಳೀಯವಿರಲಾರದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಹಲವಾರು ಘಟನೆಗಳನ್ನು ಪಟ್ಟಿ ಮಾಡಿರುವ ಶೆಹಝಾದ್ ಪೂನಾವಾಲಾ, INDIA ಮೈತ್ರಿಕೂಟದ ಕಾರ್ಯಸೂಚಿಯು ಒಡೆದಾಳುವುದು, ಸನಾತನ ಧರ್ಮವನ್ನು ಅವಮಾನಿಸುವುದು ಮತ್ತು ದೇಶದ ಜನರನ್ನು ವಿಭಜಿಸುವುದಾಗಿದೆ ಎಂದು ಆರೋಪಿಸಿದ್ದಾರೆ.