ಭಾರತದಲ್ಲಿ ಕಳೆದೊಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ: ಎನ್‌ಸಿಆರ್‌ಬಿ ಡೇಟಾ
ಹೊಸದಿಲ್ಲಿ: 2011 ಮತ್ತು 2021ರ ನಡುವೆ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.70ರಷ್ಟು ಏರಿಕೆಯಾಗಿದೆ.
ಇಂದು (ಸೆ.10) ವಿಶ್ವ ಆತ್ಮಹತ್ಯೆ ತಡೆ ದಿನ. ವಿಪರ್ಯಾಸವೆಂದರೆ ಪ್ರಸಿದ್ಧ ತರಬೇತಿ ಕೇಂದ್ರ ಕೋಟಾದಲ್ಲಿ 2015ರಿಂದೀಚಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವ ಮತ್ತು ಐಐಟಿ ದಿಲ್ಲಿಯಲ್ಲಿ ಎರಡು ತಿಂಗಳುಗಳ ಅವಧಿಯಲ್ಲಿ ಇಬ್ಬರು ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಬಳಿಕ ಭಾರತವು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸುತ್ತಿದೆ.
ಆತ್ಮಹತ್ಯೆಗಳ ಕುರಿತು ತನ್ನ ಇತ್ತೀಚಿನ ವರದಿಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB) ಒದಗಿಸಿರುವ ಮಾಹಿತಿಯಂತೆ 2021ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011ರಿಂದೀಚಿಗೆ ಭಾರತದಲ್ಲಿ ಆತ್ಮಹತ್ಯೆಗೆ ವಿದ್ಯಾರ್ಥಿಗಳ ಶರಣಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಾಮಾನ್ಯವಾಗಿ ಪ್ರತಿ ವರ್ಷ ಹೆಚ್ಚುತ್ತಲೇ ಇದೆ.
ದೇಶದಲ್ಲಿ ಒಟ್ಟು ಆತ್ಮಹತ್ಯೆಗಳಲ್ಲಿ ವಿದ್ಯಾರ್ಥಿಗಳ ಪಾಲು ಸಹ ಹೆಚ್ಚಿದೆ. 2021ರಲ್ಲಿ ಒಟ್ಟು ಆತ್ಮಹತ್ಯೆಗಳಲ್ಲಿ ವಿದ್ಯಾರ್ಥಿಗಳ ಪಾಲು ಶೇ.8ರಷ್ಟಿದೆ, 2011ರಿಂದೀಚಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.2.3ರಷ್ಟು ಏರಿಕೆಯಾಗಿದೆ.
2020ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಪಾಲು ಎರಡೂ ಹೆಚ್ಚಳಗೊಂಡಿದ್ದವು.
ಎನ್ಎಸ್ಆರ್ಬಿ ವರದಿಯಂತೆ 18ವರ್ಷಕ್ಕಿಂತ ಕಡಿಮೆ ವಯೋಮಾನದ ಗುಂಪಿನಲ್ಲಿ ಕೌಟುಂಬಿಕ ಸಮಸ್ಯೆಗಳು (3,233 ಪ್ರಕರಣಗಳು ಅಥವಾ ಒಟ್ಟು ಪ್ರಕರಣಗಳ ಶೇ.30),ಪ್ರೇಮ ವ್ಯವಹಾರಗಳು (1,495 ಪ್ರಕರಣಗಳು ಅಥವಾ ಶೇ.14),ಅನಾರೋಗ್ಯ (1408 ಪ್ರಕರಣಗಳು ಅಥವಾ ಶೇ.13),ಪರೀಕ್ಷೆಯಲ್ಲಿ ವೈಫಲ್ಯ (864 ಪ್ರಕರಣಗಳು ಅಥವಾ ಶೇ.8) ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಿವೆ. ಅನಾರೋಗ್ಯದಡಿ ಹೆಚ್ಚಿನ ಆತ್ಮಹತ್ಯೆಗಳು (ಶೇ.58) ಮಾನಸಿಕ ಅಸ್ವಸ್ಥತೆಯಿಂದಾಗಿ ಸಂಭವಿಸಿವೆ.
ಎನ್ಸಿಆರ್ಬಿ ವರದಿಯಂತೆ ಎಲ್ಲ ವಯೋಮಾನದ ಭಾರತೀಯರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರೀಕ್ಷೆಯಲ್ಲಿ ವೈಫಲ್ಯ ಕಾರಣವಾಗಿರುವ ಪ್ರಕರಣಗಳು ಸರಾಸರಿ ಶೇ.1.8ರಷ್ಟಿದೆ.
2021ರಲ್ಲಿ 1,637 ಪ್ರಕರಣಗಳಲ್ಲಿ ಆತ್ಮಹತ್ಯೆಗಳಿಗೆ ಪರೀಕ್ಷೆಯಲ್ಲಿ ವೈಫಲ್ಯ ಕಾರಣವಾಗಿತ್ತು. ಇವರಲ್ಲಿ 991 ಜನರು ಪುರುಷರಾಗಿದ್ದರೆ, 682 ಮಹಿಳೆಯರಾಗಿದ್ದಾರೆ. 2021ರಲ್ಲಿ ಈ ಕಾರಣದಿಂದಾಗಿ ಯಾವುದೇ ತೃತೀಯಲಿಂಗಿ ಆತ್ಮಹತ್ಯೆಗಳನ್ನು ಎನ್ಸಿಆರ್ಬಿ ವರದಿ ಮಾಡಿಲ್ಲ.
ಕೋಟಾ ಪೊಲೀಸರ ದತ್ತಾಂಶಗಳಂತೆ 2019ರಲ್ಲಿ ನಗರದಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ತರಗತಿಗಳು ಆಫ್ಲೈನ್ ವಿಧಾನಕ್ಕೆ ಮರಳಿದ್ದು,ಇದರೊಂದಿಗೆ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಮತ್ತೆ ಹೆಚ್ಚಾಗಿವೆ. 2021ರಲ್ಲಿ ಶೂನ್ಯವಿದ್ದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು 2022ರಲ್ಲಿ 15ಕ್ಕೆ ಏರಿಕೆಯಾಗಿವೆ.
ಈ ವರ್ಷದಲ್ಲಿ ಈವರೆಗೆ ಕೋಟಾದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆಗಸ್ಟ್ ತಿಂಗಳೊಂದರಲ್ಲಿಯೇ ಇಂತಹ ನಾಲ್ಕು ಘಟನೆಗಳು ಸಂಭವಿಸಿವೆ. ಇದು 2015ರಿಂದೀಚಿಗೆ ಅತ್ಯಧಿಕವಾಗಿದೆ, ಆ ವರ್ಷ 17 ವಿದ್ಯಾರ್ಥಿಗಳು ಅತ್ಮಹತ್ಯೆಗೆ ಶರಣಾಗಿದ್ದರು.
ವಿದ್ಯಾರ್ಥಿಗಳು ಓದುತ್ತಿರುವ/ವಾಸವಿರುವ ಪ್ರತಿ ಕೊಠಡಿಯಲ್ಲಿಯೂ ಸುರಕ್ಷತೆಗಾಗಿ ಸ್ಪ್ರಿಂಗ್ ಲೋಡೆಡ್ ಫ್ಯಾನ್ ಗಳನ್ನು ಅಳವಡಿಸುವಂತೆ ಕೋಟಾ ಜಿಲ್ಲಾಡಳಿತವು ಹಾಸ್ಟೆಲ್ ಗಳು ಮತ್ತು ಪಿಜಿಗಳಿಗೆ ನಿರ್ದೇಶನ ನೀಡಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸುಸೈಡ್ ಪ್ರಿವೆನ್ ಶನ್ ಆಫ್ ಇಂಡಿಯಾ ಪ್ರತಿಷ್ಠಾನದ ಸಂಸ್ಥಾಪಕ ನೆಲ್ಸನ್ ವಿನೋದ್ ಮೋಸೆಸ್ ಅವರು, ಕೋವಿಡ್ ಸಾಂಕ್ರಾಮಿಕವು ಭಾರತದಲ್ಲಿಯ ಯುವ ವಯಸ್ಕರಲ್ಲಿ ಮಾನಸಿಕ ತೊಳಲಾಟವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಅವರು ಡಿಜಿಟಲ್ ಕಲಿಕೆಯನ್ನು ಅವಲಂಬಿಸಿದ್ದರು ಮತ್ತು ಸಾಮಾನ್ಯ ಜಗತ್ತಿಗೆ ಮರಳಿದಾಗ ಹೆಚ್ಚಿನವರಿಗೆ ಸೂಕ್ತವಾಗಿ ಸಂವಹನವನ್ನು ನಡೆಸಲು, ಗೆಳೆತನವನ್ನು ಬೆಳೆಸಿಕೊಳ್ಳಲು ಮತ್ತು ಸಾಮಾಜಿಕ ಬಂಧವನ್ನು ಹೊಂದಲೂ ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.