ಶಾಲಾ ವಿದ್ಯಾರ್ಥಿಗೆ ಗುಂಡಿಕ್ಕಿದ ನರ್ಸರಿ ಬಾಲಕ | ಬಿಹಾರದಲ್ಲಿ ಆಘಾತಕಾರಿ ಘಟನೆ

Update: 2024-07-31 17:06 GMT

ಸಾಂದರ್ಭಿಕ ಚಿತ್ರ

ಪಾಟ್ನಾ : ಬಿಹಾರದಲ್ಲಿ ಐದು ವರ್ಷ ವಯಸ್ಸಿನ ಬಾಲಕನೊಬ್ಬ ಶಾಲೆಗೆ ಹ್ಯಾಂಡ್‌ಗನ್ ತಂದು ಮೂರನೇ ತರಗತಿಯ ವಿದ್ಯಾರ್ಥಿಗೆ ಗುಂಡಿಕ್ಕಿ ಗಾಯಗೊಳಿಸಿದ ಆಘಾತಕಾರಿ ಘಟನೆ ಬುಧವಾರ ನಡೆದಿದೆ.

ಸುಪೌಲ್ ಜಿಲ್ಲೆಯ ಸೈಂಟ್ ಜಾನ್ಸ್ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನರ್ಸರಿ ತರಗತಿಯ ಬಾಲಕನೊಬ್ಬ ಹ್ಯಾಂಡ್‌ಗನ್ ಒಂದನ್ನು ತನ್ನ ಬ್ಯಾಗ್‌ನಲ್ಲಿ ಬಚ್ಟಿಟ್ಟು ತಂದಿದ್ದನು.

ಬಾಲಕನು ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಹತ್ತು ವರ್ಷದ ವಿದ್ಯಾರ್ಥಿಗೆ ಗುಂಡಿಕ್ಕಿದ್ದಾನೆ. ವಿದ್ಯಾರ್ಥಿಯ ಕೈಗೆ ಬುಲೆಟ್‌ನಿಂದ ಗಾಯವಾಗಿದೆ ಎಂದು ವರದಿ ತಿಳಿಸಿದೆ.

ಗಾಯಾಳು ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೂರು ವರ್ಷದ ಬಾಲಕನ ಕೈಗೆ ಹ್ಯಾಂಡ್‌ಗನ್ ಬಂದಿದ್ದು ಹೇಗೆ ಹಾಗೂ ಆತನಿಗೆ ಅದನ್ನು ಲಾಲ್‌ಪತ್ತಿ ಪ್ರದೇಶದಲ್ಲಿರುವ ಶಾಲೆಯೊಳಗೆ ತರಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ.

ಈ ಘಟನೆಯು ಪಾಲಕರು ಹಾಗೂ ಪೋಷಕರಲ್ಲಿ ಆತಂಕವನ್ನು ಮೂಡಿಸಿದೆ. ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡುವಂತೆ ಜಿಲ್ಲೆಯ ಶಾಲೆಗಳಿಗೆ ಸೂಚಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ ಎಸ್.ಪಿ.ಯಾದವ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಶಾಲಾ ಪ್ರಾಂಶುಪಾಲರನ್ನು ಬಂಧಿಸಲಾಗಿದ್ದು, ಇಂತಹ ನಿರ್ಲಕ್ಷ್ಯ ಸಂಭವಿಸಿದ್ದು ಹೇಗೆ ಎಂಬ ಬಗ್ಗೆ ಅವರನ್ನು ಪ್ರಶ್ನಿಸುತ್ತಿದ್ದಾರೆ.

ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಕೋಚಿಂಗ್ ಸೆಂಟರ್ ಒಂದರ ಶಿಕ್ಷಕನನ್ನು 16 ವರ್ಷದ ಬಾಲಕನೊಬ್ಬ ಹತ್ಯೆಗೈದ ಘಟನೆ ವರದಿಯಾಗಿತ್ತು.

ಕಲಿಕೆಯಲ್ಲಿ ಕಳಪೆ ನಿರ್ವಹಣೆಗಾಗಿ ತನ್ನನ್ನು ಬೈದಿದ್ದಕ್ಕಾಗಿ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕ ರಾಜೇಸ್ ಬರೂವಾ ಬೆಜವಾಡ ಅವರಿಗೆ ಚೂರಿಯಿಂದ ಇರಿದಿದ್ದನು. ಗಾಯಾಳು ಶಿಕ್ಷಕನನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆಗಲೇ ಆತ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News