ದೀಪಾವಳಿಗೆ ಮುನ್ನ ಸಮ-ಬೆಸ ನಿಯಮ ಜಾರಿಗೊಳಿಸಿರುವುದು ಸನಾತನ ಧರ್ಮದ ವಿರುದ್ಧ ಕೇಜ್ರಿವಾಲ್‌ರ ಸಂಚು: ಬಿಜೆಪಿ ಸಂಸದ

Update: 2023-11-07 10:27 GMT

ಬಿಜೆಪಿ ಸಂಸದ ರಮೇಶ್ ಬಿಧುರಿ (PTI)

ಹೊಸದಿಲ್ಲಿ: ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ದೀಪಾವಳಿಗೆ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಸಮ-ಬೆಸ ನಿಯಮದ ಜಾರಿ ಕುರಿತು ಮಂಗಳವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್‌ರನ್ನು ‘ನಗರ ನಕ್ಸಲ್ ’ಎಂದು ಬಣ್ಣಿಸಿದ ಅವರು, ಸಮ-ಬೆಸ ಯೋಜನೆಯು ಸನಾತನ ಧರ್ಮದ ವಿರುದ್ಧ ಪಿತೂರಿಯಾಗಿದೆ ಮತ್ತು ದೀಪಾವಳಿ ಸಂದರ್ಭದಲ್ಲಿ ಜನರು ಪರಸ್ಪರ ಭೇಟಿಯಾಗಲು ಸಾಧ್ಯವಾಗಬಾರದು ಎಂಬ ಉದ್ದೇಶದಿಂದ ಅದನ್ನು ಜಾರಿಗೊಳಿಸಲಾಗುತ್ತದೆ ಎಂದು ಆರೋಪಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಧುರಿ,‘ಕೇಜ್ರಿವಾಲ್ ನಮ್ಮ ದೇಶವನ್ನು ಹಾಳುಗೆಡವಲು ವಿದೇಶಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ. ಕೇಜ್ರಿವಾಲ್‌ರಂತಹ ಜನರಿಂದ ನಮ್ಮ ಸಂಸ್ಕೃತಿಯು ಅವನತಿಗೊಳ್ಳುತ್ತಿದೆ ’ ಎಂದು ಹೇಳಿದರು.

ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದಕ್ಕಾಗಿಯೂ ಕೇಜ್ರಿವಾಲ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು,‘ನಮ್ಮ ಹಬ್ಬಗಳನ್ನೇಕೆ ನಿಷೇಧಿಸುತ್ತಿದ್ದೀರಿ? ದೀಪಾವಳಿಯಂದು ಜನರು ಪರಸ್ಪರ ಭೇಟಿಯಾಗದಂತೆ ಸಮ-ಬೆಸ ನಿಯಮವನ್ನು ಅನುಷ್ಠಾನಿಸಲಾಗುತ್ತಿದೆ. ಅವರು (ಆಪ್) ವಿದೇಶಿಯರಿಂದ ಹಣವನ್ನು ಪಡೆದು ನಮ್ಮ ಹಬ್ಬಗಳ ಮೇಲೆ ನಿಷೇಧ ಹೇರುತ್ತಿದ್ದಾರೆ ’ ಎಂದರು.

‘ತಥಾಕಥಿತ ಜಾತ್ಯತೀತ ಮತ್ತು ಬುದ್ಧಿಜೀವಿ’ ಜನರು ನಿಷೇಧದ ಬದಲು ವಾಯುಮಾಲಿನ್ಯವನ್ನು ತಡೆಯಲು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಬಿಧುರಿ ಕೇಜ್ರಿವಾಲ್‌ರನ್ನು ಉದ್ದೇಶಿಸಿ ಹೇಳಿದರು.

ವಾಹನಗಳ ನಂಬರ್ ಪ್ಲೇಟ್‌ಗಳನ್ನು ಆಧರಿಸಿ ದಿಲ್ಲಿಯ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸುವ ಸಮ-ಬೆಸ ನಿಯಮವು ನ.13ರಿಂದ ನ.20ರವರೆಗೆ ಜಾರಿಯಲ್ಲಿರಲಿದೆ. ನ.12ರಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಸೋಮವಾರ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ವಾಯುಮಾಲಿನ್ಯವನ್ನು ತಡೆಯಲು ಸಮ-ಬೆಸ ನಿಯಮದ ಜಾರಿಯ ಜೊತೆಗೆ ಇತರ ಹಲವು ಕ್ರಮಗಳನ್ನೂ ದಿಲ್ಲಿ ಸರಕಾರವು ತೆಗೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News