ಹಿಮಾಚಲ ಪ್ರದೇಶ | ತೈಲ ಟ್ಯಾಂಕರ್ ಉರುಳಿ ಬಿದ್ದು, ಅಗ್ನಿಗಾಹುತಿ; ಓರ್ವ ಮೃತ್ಯು
ಊನಾ: ತೈಲ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು, ಓರ್ವ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ರವಿವಾರ ಇಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಹರೋಲಿ ಪ್ರದೇಶದಲ್ಲಿನ ತಹಿಲ್ವಾಲ ಕಸ್ವ ಗ್ರಾಮದಲ್ಲಿ ನಡೆದಿರುವ ಈ ಘಟನೆಯಿಂದ 15 ಮಳಿಗೆಗಳು ನಾಶಗೊಂಡಿದ್ದು, ಹಲವಾರು ವಾಹನಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದೆ.
ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಹೇಳಿದೆ.
ಡೀಸೆಲ್ ತುಂಬಿದ್ದ ಟ್ಯಾಂಕರ್‌ನ ಬ್ರೇಕ್ ಫೇಲ್ ಆದ ಕಾರಣ, ಮಾರುಕಟ್ಟೆ ಸ್ಥಳದಲ್ಲಿ ಉರುಳಿ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಒಂದು ಸ್ಕೂಟರ್ ಸೇರಿದಂತೆ ಹಲವಾರು ವಾಹನಗಳು ನಜ್ಜುಗುಜ್ಹಾಗಿದ್ದು, ಇದರ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತ ಸ್ಕೂಟರ್ ಸವಾರನನ್ನು ಪಂಜಾಬ್ ನಿವಾಸಿ ಸುಭಾಷ್ ಚಂದರ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಗೊಂಡಿರುವ ಎಂಟು ಮಂದಿಯ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಅತನನ್ನು ಚಿಕಿತ್ಸೆಗಾಗಿ ಊನಾದ ಪ್ರಾಂತೀಯ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.
ಘಟನೆಯ ಕುರಿತು ಸ್ಥಳೀಯ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.