‘ಒಬ್ಬ ವ್ಯಕ್ತಿ, ಒಂದು ಸರಕಾರ, ಒಂದು ಉದ್ಯಮ ಸಮೂಹ’: ಅದಾನಿ ವಿಷಯದಲ್ಲಿ ಸರಕಾರದ ವಿರುದ್ಧ ಕಾಂಗ್ರೆಸ್ ದಾಳಿ

Update: 2023-09-09 17:40 GMT

ಅದಾನಿ ಸಮೂಹ , ಜೈರಾಮ ರಮೇಶ್ | Photo: PTI  

ಹೊಸದಿಲ್ಲಿ: ಶನಿವಾರ ಅದಾನಿ ವಿಷಯದಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಒಂದು ಭೂಮಿ,ಒಂದು ಕುಟುಂಬ,ಒಂದು ಭವಿಷ್ಯ ’ ಜಿ20 ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ಆದರೆ ವಾಸ್ತವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಒಬ್ಬ ವ್ಯಕ್ತಿ,ಒಂದು ಸರಕಾರ,ಒಂದು ಉದ್ಯಮ ಸಮೂಹ’ದಲ್ಲಿ ನಂಬಿಕೆಯಿಟ್ಟಿರುವಂತೆ ಕಾಣುತ್ತಿದೆ ಎಂದು ಹೇಳಿದೆ.

ದಿಲ್ಲಿಯಲ್ಲಿ ಜಿ20 ಶೃಂಗಸಭೆಯು ಆರಂಭಗೊಂಡಿರುವ ಈ ಸಂದರ್ಭದಲ್ಲಿ,ಗುಂಪಿನ ಹಿಂದಿನ ಸಭೆಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಕಡಿವಾಣ ಹಾಕುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮೋದಿಯವರ ಹಲವಾರು ಉಪದೇಶಗಳನ್ನು ನೆನಪಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2014ರ ಬ್ರಿಸ್ಬೇನ್ ಜಿ20 ಸಭೆಯಲ್ಲಿ ಮೋದಿಯವರು ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗಗಳನ್ನು ತೊಡೆದುಹಾಕಲು,ಅಕ್ರಮ ಹಣ ವರ್ಗಾವಣೆ ಮಾಡುವವರನ್ನು ಪತ್ತೆ ಹಚ್ಚಲು ಮತ್ತು ಅವರನ್ನು ಬೇಷರತ್ತಾಗಿ ಹಸ್ತಾಂತರಿಸಲು ಹಾಗೂ ಭ್ರಷ್ಟರು ಮತ್ತು ಅವರ ಕೃತ್ಯಗಳನ್ನು ಮರೆಮಾಚುವ ಸಂಕೀರ್ಣ ಅಂತರಾಷ್ಟ್ರೀಯ ನಿಯಮಗಳು ಮತ್ತು ಅತಿಯಾದ ಬ್ಯಾಂಕಿಂಗ್ ಗೋಪ್ಯತೆಯ ಜಾಲವನ್ನು ಬೇಧಿಸಲು ಜಾಗತಿಕ ಸಹಕಾರಕ್ಕೆ ಕರೆ ನೀಡಿದ್ದರು. 2018ರ ಬ್ಯೂನಸ್ ಐರಿಸ್ ಜಿ20 ಶೃಂಗಸಭೆಯಲ್ಲಿ ಮೋದಿಯವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕ್ಕೆ ಮತ್ತು ಆಸ್ತಿ ಸ್ವಾಧೀನಕ್ಕಾಗಿ ಒಂಭತ್ತು ಅಂಶಗಳ ಅಜೆಂಡಾವನ್ನು ಮಂಡಿಸಿದ್ದರು ಎಂದು ರಮೇಶ ತನ್ನ ಹೇಳಿಕೆಯಲ್ಲಿ ನೆನಪಿಸಿದ್ದಾರೆ.

ಉನ್ನತ ಮಟ್ಟದ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳಲ್ಲಿ ಪ್ರಧಾನಿಯವರ ಸಹಭಾಗಿತ್ವವು ಅಷ್ಟೊಂದು ಗಂಭೀರವಾಗಿರುವಾಗ ಅವರ ಲಜ್ಜೆಗೇಡಿತನವು ನಗುವನ್ನು ತರಿಸುತ್ತದೆ ಎಂದಿರುವ ಅವರು,ಮೋದಿಯವರು ತನ್ನ ಬಳಿ ಲಭ್ಯವಿರುವ ಎಲ್ಲ ಸಾಧನಗಳನ್ನು ಬಳಸಿಕೊಂಡು ಬಂದರುಗಳು,ವಿಮಾನ ನಿಲ್ದಾಣಗಳು,ವಿದ್ಯುತ್ ಮತ್ತು ರಸ್ತೆ ನಿರ್ಮಾಣದಂತಹ ಕ್ಷೇತ್ರಗಳಲ್ಲಿ ತನ್ನ ಆಪ್ತಮಿತ್ರರಾದ ಅದಾನಿಗಳಿಗಾಗಿ ‘ಮೋದಿ ನಿರ್ಮಿತ ಏಕಸ್ವಾಮ್ಯ ’ಗಳನ್ನು ಸೃಷ್ಟಿಸಲು ಅನುಕೂಲ ಕಲ್ಪಿಸಿದ್ದು ಮಾತ್ರವಲ್ಲ,ಸೆಬಿ,ಸಿಬಿಐ,ಈ.ಡಿ.ಮತ್ತು ಡಿಆರ್ಐನಂತಹ ಸಂಸ್ಥೆಗಳ ಮೂಲಕ ಅದಾನಿಯ ಕುಕೃತ್ಯಗಳ ಕುರಿತು ಎಲ್ಲ ತನಿಖೆಗಳನ್ನೂ ನಿರ್ಬಂಧಿಸಿದ್ದಾರೆ. ತನ್ಮೂಲಕ ತೆರಿಗೆ ಸ್ವರ್ಗಗಳು ತನ್ನ ಆಪ್ತಮಿತ್ರರಿಗೆ ಸುರಕ್ಷಿತವಾಗಿರುವಂತೆ ಮತ್ತು ಅವರು ಅತಿಯಾದ ಬ್ಯಾಂಕಿಂಗ್ ಗೋಪ್ಯತೆ ಹಾಗೂ ಸಂಕೀರ್ಣ ಅಂತರರಾಷ್ಟ್ರೀಯ ನಿಯಮಗಳ ರಕ್ಷಣೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ ಮಲ್ಯ ಅವರಂತಹ ಆರ್ಥಿಕ ಅಪರಾಧಿಗಳು ಸುಲಭವಾಗಿ ದೇಶದಿಂದ ಪರಾರಿಯಾಗಲು ಬಿಜೆಪಿ ಅನುಮತಿಸಿದ್ದು ಪ್ರಧಾನಿಯವರ ಒಂಭತ್ತು ಅಂಶಗಳ ಅಜೆಂಡಾವನ್ನೂ ನಗೆಪಾಟಲಿಗೀಡಾಗುವಂತೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ 72 ಪ್ರಮುಖ ಆರ್ಥಿಕ ಅಪರಾಧಿಗಳ ಪೈಕಿ ಕೇವಲ ಇಬ್ಬರನ್ನು ಮರಳಿ ತರುವಲ್ಲಿ ಸಾಧ್ಯವಾಗಿದೆ ಎಂದು ಸರಕಾರವೇ ಸ್ವತಃ ಒಪ್ಪಿಕೊಂಡಿದೆ ಎಂದೂ ರಮೇಶ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News