ಮಹಿಳೆಯರ ವಿರುದ್ಧ ಮೂರನೇ ಒಂದರಷ್ಟು ಅಪರಾಧಗಳು ಪತಿ, ಆತನ ಸಂಬಂಧಿಗಳಿಂದಲೇ ನಡೆಯುತ್ತವೆ: ವರದಿ
ಹೊಸದಿಲ್ಲಿ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್)ಯ ವರದಿಯಂತೆ 15ರಿಂದ 49 ವರ್ಷ ವಯೋಮಾನದ ನಡುವಿನ ಶೇ.45ರಷ್ಟು ಮಹಿಳೆಯರು ಮತ್ತು ಶೇ.44ರಷ್ಟು ಪುರುಷರು ಪತಿ ತನ್ನ ಪತ್ನಿಯನ್ನು ಹೊಡೆಯುವುದು ಸರಿ ಎಂದು ನಂಬಿದ್ದಾರೆ. ಈ ನಂಬಿಕೆಗೆ ಆಧಾರವಾಗಿರುವ ಏಳು ಕಾರಣಗಳನ್ನು ಸಮೀಕ್ಷೆಯಲ್ಲಿ ಪಟ್ಟಿ ಮಾಡಲಾಗಿದೆ ಎಂದು newsclick.in ವರದಿ ಮಾಡಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (NCRB)ದ ಪ್ರಕಾರ ಮಹಿಳೆಯರ ವಿರುದ್ಧದ ಮೂರನೇ ಒಂದರಷ್ಟು ಅಪರಾಧಗಳು ಗಂಡ ಮತ್ತು ಆತನ ಸಂಬಂಧಿಗಳಿಂದಲೇ ನಡೆಯುತ್ತವೆ. 2021ರಲ್ಲಿ ಗಂಡ ಅಥವಾ ಆತನ ಸಂಬಂಧಿಗಳಿಂದ ಮಹಿಳೆಯರ ವಿರುದ್ಧ ಕ್ರೌರ್ಯದ 1,36,234 ಘಟನೆಗಳನ್ನು NCRB ಡೇಟಾ ದಾಖಲಿಸಿದೆ. ಇದು ಆ ಸಾಲಿನಲ್ಲಿ ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳ ಮೂರನೇ ಒಂದರಷ್ಟಾಗಿದೆ. 2017ರಲ್ಲಿ ಇಂತಹ 1,04,551 ಘಟನೆಗಳು ದಾಖಲಾಗಿದ್ದವು.
ಇಂತಹ ಅತ್ಯಂತ ಹೆಚ್ಚಿನ ಪ್ರಕರಣಗಳು (19,952) ಪಶ್ಚಿಮ ಬಂಗಾಳದಲ್ಲಿ ದಾಖಲಾಗಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನ ನಂತರದ ಸ್ಥಾನಗಳಲ್ಲಿವೆ.
ಮಹಿಳೆಯರ ವಿರುದ್ಧ ಗಂಡ ಮತ್ತು ಆತನ ಸಂಬಂಧಿಗಳಿಂದ ಅಪರಾಧ ಘಟನೆಗಳಲ್ಲಿ ಶೇ.30ರಷ್ಟು ತೀವ್ರ ಏರಿಕೆಯಾಗಿದೆ. ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳಲ್ಲಿ ಇಂತಹ ಅಪರಾಧಗಳ ಪಾಲು 2017ರಲ್ಲಿ ಶೇ.33ರಷ್ಟಿದ್ದರೆ 2021ರಲ್ಲಿ ಶೇ.38ಕ್ಕೆ ಹೆಚ್ಚಿದೆ.
ಉತ್ತರ ಪ್ರದೇಶ ಮತ್ತು ರಾಜಸ್ಥಾನ ಅಪರಾಧ ಅಂಕಿಅಂಶಗಳಲ್ಲಿ ಆಗಾಗ್ಗೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವ ಎರಡು ರಾಜ್ಯಗಳಾಗಿವೆ. ಮಹಿಳೆಯರ ಘನತೆಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಅವರ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಮೂರನೇ ಸ್ಥಾನದಲ್ಲಿದ್ದರೆ ರಾಜಸ್ಥಾನ ನಾಲ್ಕನೇ ಸ್ಥಾನದಲ್ಲಿದೆ. ಇಂತಹ ಪ್ರಕರಣಗಳಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿ ಮತ್ತು ಮಹಾರಾಷ್ಟ್ರ ಎರಡನೇ ಸ್ಥಾನಗಳಲ್ಲಿವೆ.
ಐದನೇ ಸುತ್ತಿನ ಎನ್ಎಫ್ಎಚ್ಎಸ್ ಸಮೀಕ್ಷೆಯ ಪ್ರಕಾರ,ಭಾರತೀಯ ಜನಸಂಖ್ಯೆಯ ಅರ್ಧದಷ್ಟು ಭಾಗವು ತಿಳಿಸದೇ ಹೊರಗೆ ಹೋದ,ಅತ್ತೆ-ಮಾವಂದಿರಿಗೆ ಅಗೌರವ ತೋರಿಸಿದ ಮತ್ತು ಪತಿಯ ನಿಷ್ಠೆಯನ್ನು ಶಂಕಿಸಿದ ಇತ್ಯಾದಿ ಕಾರಣಗಳಿಗಾಗಿ ಪತಿ ತನ್ನ ಪತ್ನಿಯನ್ನು ಥಳಿಸುವುದನ್ನು ಸಮರ್ಥಿಸಿಕೊಂಡಿದೆ.