ನ್ಯಾಯಾಲಯಗಳ ಆವರಣಗಳಲ್ಲಿ ಮಹಾತ್ಮಾ ಗಾಂಧಿ, ತಿರುವಳ್ಳುವರ್ ಭಾವಚಿತ್ರಗಳಿಗೆ ಮಾತ್ರ ಅವಕಾಶ: ಮದ್ರಾಸ್ ಹೈಕೋರ್ಟ್

Update: 2023-07-23 12:27 GMT

Photo: ಮದ್ರಾಸ್ ಹೈಕೋರ್ಟ್ | PTI 

ಚೆನ್ನೈ: ನ್ಯಾಯಾಲಯದ ಆವರಣಗಳಲ್ಲಿ ಮಹಾತ್ಮಾ ಗಾಂಧಿ ಮತ್ತು ಸಂತ ತಿರುವಳ್ಳುವರ್ ಅವರ ಭಾವಚಿತ್ರಗಳನ್ನು ಮಾತ್ರ ಪ್ರದರ್ಶಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡಿನಲ್ಲಿಯ ಎಲ್ಲ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂಬಂಧಿಸಿದ ವಕೀಲರ ಸಂಘಗಳ ಹಿರಿಯ ನ್ಯಾಯವಾದಿಗಳ ಭಾವಚಿತ್ರಗಳಿಗೆ ಅವಕಾಶ ನೀಡುವಂತೆ ಕೋರಿ ಹಲವಾರು ವಕೀಲರ ಸಂಘಗಳು ಸಲ್ಲಿಸಿದ್ದ ಅಹವಾಲುಗಳಿಗೆ ಪ್ರತಿಕ್ರಿಯಿಸಿ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಜು.7ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಈ ಸಂಬಂಧ ಹೈಕೋರ್ಟ್ನ ಪೂರ್ಣ ನ್ಯಾಯಾಲಯವು ಬಹು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪುನರುಚ್ಚರಿಸಿದೆ.

ಮದ್ರಾಸ್ ಉಚ್ಚ ನ್ಯಾಯಾಲಯವು ಗೌರವಾನ್ವಿತ ಪೂರ್ಣ ನ್ಯಾಯಾಲಯದ ಸಭೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಈ ವಿಷಯವನ್ನು ಪರಿಶೀಲಿಸಿದೆ. ಎಪ್ರಿಲ್ 11,2023ರ ಇತ್ತೀಚಿನ ಸಭೆಯಲ್ಲಿಯೂ ಪೂರ್ಣ ನ್ಯಾಯಾಲಯವು ಇಂತಹುದೇ ಮನವಿಯನ್ನು ಪರಿಶೀಲಿಸಿದ್ದು ಹಿಂದಿನ ಎಲ್ಲ ನಿರ್ಣಯಗಳನ್ನು ಪುನರುಚ್ಚರಿಸುತ್ತ, ಮಹಾತ್ಮಾ ಗಾಂಧೀಜಿ ಮತ್ತು ಸಂತ ತಿರುವಳ್ಳುವರ್ ಅವರ ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ಹೊರತುಪಡಿಸಿ ಇತರ ಯಾವುದೇ ಭಾವಚಿತ್ರ ಅಥವಾ ಛಾಯಾಚಿತ್ರಗಳನ್ನು ನ್ಯಾಯಾಲಯದ ಆವರಣದೊಳಗೆ ಎಲ್ಲಿಯೂ ಪ್ರದರ್ಶಿಸುವಂತಿಲ್ಲ ಎಂದು ಸರ್ವಾನುಮತದಿಂದ ನಿರ್ಣಯಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪೂರ್ಣ ನ್ಯಾಯಾಲಯದ ನಿರ್ಧಾರಕ್ಕೆ ಬದ್ಧವಾಗಿರುವಂತೆ ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿರುವ ಸುತ್ತೋಲೆಯು,ಇದನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದ ಸುತ್ತೋಲೆಯು ಪುದುಚೇರಿಗೂ ಅನ್ವಯಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News