ಕೊಲ್ಕತ್ತಾದ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ದೇಶಾದ್ಯಂತ ವೈದ್ಯರಿಂದ ಪ್ರತಿಭಟನೆ

Update: 2024-08-13 05:56 GMT

ಹೊಸದಿಲ್ಲಿ: ಕೊಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿದ್ದು ತುರ್ತು ವೈದ್ಯಕೀಯ ಪ್ರಕ್ರಿಯೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳು ಬಾಧಿತವಾಗಿವೆ.

ಆಸ್ಪತ್ರೆಗಳಲ್ಲಿ ಕೆಲ ಆಯ್ದ ಸೇವೆಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಫೆಡರೇಷನ್‌ ಆಫ್‌ ರೆಸಿಡೆಂಟ್‌ ಡಾಕ್ಟರ್ಸ್‌ ಅಸೋಸಿಯೇಶನ್‌ ಸೋಮವಾರ ಕರೆ ನೀಡಿತ್ತು.

ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆಯ ಘನತೆ ಮತ್ತು ಜೀವನವನ್ನು ರಕ್ಷಿಸಲು ವಿಫಲವಾದ ಎಲ್ಲರೂ ರಾಜೀನಾಮೆ ನೀಡಬೇಕೆಂದು ಸಂಸ್ಥೆ ಆಗ್ರಹಿಸಿದೆ.

ಆರೋಗ್ಯ ಸೇವಾ ಕೆಲಸಗಾರರಿಗೆ ಸುರಕ್ಷತಾ ಪ್ರೊಟೋಕಾಲ್‌ಗಳನ್ನು ಅಸೋಸಿಯೇಶನ್‌ ಆಗ್ರಹಿಸಿದೆ.

ಪ್ರತಿಭಟನೆಗಳಿಂದ ಕೊಲ್ಕತ್ತಾದ ಹೆಚ್ಚಿನ ಆಸ್ಪತ್ರೆಗಳಲ್ಲಿ ಸೇವೆಗಳು ಬಾಧಿತವಾಗಿ ರೋಗಿಗಳು ಅನಾನುಕೂಲ ಎದುರಿಸುತ್ತಿದ್ದಾರೆ.

ಉತ್ತರ ಪ್ರದೇಶದ ಲಕ್ನೋದ ಕಿಂಗ್‌ ಜಾರ್ಜ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲೂ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಮುಂಬೈನ ಜೆ ಜೆ ಆಸ್ಪತ್ರೆ, ಸಯೋನ್‌ ಆಸ್ಪತ್ರೆ, ನಾಯರ್‌ ಆಸ್ಪತ್ರೆ, ಕಿಂಗ್‌ ಎಡ್ವರ್ಡ್‌ ಮೆಮೋರಿಯಲ್‌ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳ ವೈದ್ಯರೂ ಪ್ರತಿಭಟಿಸುತ್ತಿದ್ದಾರೆ.

ದಿಲ್ಲಿಯ ಏಮ್ಸ್‌ ಆಸ್ಪತ್ರೆಯ ವೈದ್ಯರೂ ಪ್ರತಿಭಟನೆ ನಡೆಸುತ್ತಿದ್ದು ಇಂದು ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ಶಸ್ತ್ರಕ್ರಿಯೆಗಳ ಸಂಖ್ಯೆ ಶೇ.80ರಷ್ಟು ಕಡಿಮೆಯಾಗಿದೆ. ದಾಖಲಾತಿಗಳೂ ಶೇ35ರಷ್ಟು ಕಡಿಮೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News