ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳ ಆಗ್ರಹ

Update: 2023-09-17 17:15 GMT

                                                          Photo: X \ @JoshiPralhad

ಹೊಸದಿಲ್ಲಿ : ವಿಶೇಷ ಸಂಸತ್ ಅಧಿವೇಶನದ ಮುನ್ನಾದಿನವಾದ ರವಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿವಿಧ ಪ್ರತಿಪಕ್ಷಗಳ ಸದನ ನಾಯಕರು ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಕ್ಕೆ ಆಗ್ರಹಿಸಿದರು. ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲು ಉದ್ದೇಶಿಸಿದೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಕ್ಕೆ ಎಲ್ಲ ಪ್ರತಿಪಕ್ಷಗಳು ಆಗ್ರಹಿಸಿದವು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿಯವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಇದೇ ಬೇಡಿಕೆಯನ್ನು ಪ್ರತಿಧ್ವನಿಸಿದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು, ಸೆ.19ರಂದು ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸಂಸತ್ತು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಿದರು.

ಬಿಜೆಡಿ ಮತ್ತು ಬಿಆರ್‌ಎಸ್ ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳೂ ಮಸೂದೆ ಮಂಡನೆಗೆ ಆಗ್ರಹಿಸಿವೆ. ಕೇಂದ್ರ ಸಚಿವರಾದ ರಾಜನಾಥ ಸಿಂಗ್,ಪಿಯೂಷ ಗೋಯಲ್ ಮತ್ತು ಪ್ರಹ್ಲಾದ ಜೋಶಿ ಅವರು ಸರ್ವಪಕ್ಷ ಸಭೆಯಲ್ಲಿ ಸರಕಾರವನ್ನು ಪ್ರತಿನಿಧಿಸಿದ್ದರು.

ವಿಶೇಷ ಸಂಸತ್ ಅಧಿವೇಶನದ ಅಜೆಂಡಾ :

ಕೊನೆಗೂ ವಿಶೇಷ ಅಧಿವೇಶನದ ಅಜೆಂಡಾ ಪಟ್ಟಿಯನ್ನು ಹೊರತಂದಿರುವ ಸರಕಾರವು ಸಂವಿಧಾನ ಸಭೆಯಿಂದ ಆರಂಭಗೊಂಡು 75 ವರ್ಷಗಳ ಸಂಸತ್ತಿನ ಪಯಣದ ಕುರಿತು ಚರ್ಚೆಯು ಅಧಿವೇಶನದ ಪ್ರಮುಖ ವೈಶಿಷ್ಟ್ಯವಾಗಿದೆ ಎಂದು ಹೇಳಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕ ಕುರಿತು ಮಸೂದೆಯನ್ನೂ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಸರಕಾರವು ಪಟ್ಟಿ ಮಾಡಿದೆ. ವಕೀಲರ (ತಿದ್ದುಪಡಿ) ಮಸೂದೆ 2023, ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ 2023 ಮತ್ತು ಅಂಚೆಕಚೇರಿ ಮಸೂದೆ 2023 ಕೂಡ ಅಧಿವೇಶನದ ಅಜೆಂಡಾದಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News