ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಪ್ರಸ್ತಾವಿಸಿದ ವಿಪಕ್ಷ ಸದಸ್ಯರು | ರಚನಾತ್ಮಕ ಚರ್ಚೆಗೆ ಸ್ಪೀಕರ್ ಕರೆ

Update: 2024-07-22 15:50 GMT

 ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ : ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ಲೋಕಸಭೆಯಲ್ಲಿ ಹೇಳಿದರು. ಇದನ್ನು ಬಲವಾಗಿ ತಿರಸ್ಕರಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು,ಕಳೆದ ಏಳು ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಪ್ರತಿಪಾದಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ವಿಷಯದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷವು ಮುಂದಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು, ಎಲ್ಲ ಪರೀಕ್ಷೆಗಳ ಕುರಿತು ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ ಮತ್ತು ಸದಸ್ಯರು ಉತ್ತಮ ಪರೀಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳ ಅರೋಪಗಳ ತನಿಖೆ ನಡೆಸುತ್ತಿರುವ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಯಿದೆ, ನೀಟ್ ಮಾತ್ರವಲ್ಲ, ಎಲ್ಲ ಪ್ರಮುಖ ಪರೀಕ್ಷೆಗಳಲ್ಲಿಯೂ ಸಮಸ್ಯೆಯಿದೆ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಹೇಳಿದರು. ಲಕ್ಷಾಂತರ ವಿದ್ಯಾರ್ಥಿಗಳು ಕಳವಳಕ್ಕೀಡಾಗಿದ್ದಾರೆ ಎಂದು ಬೆಟ್ಟು ಮಾಡಿದ ಅವರು, ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮ ಬಳಿ ಹಣವಿದ್ದರೆ ನೀವು ಭಾರತೀಯ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು ಎಂದು ಕಿಡಿಕಾರಿದರು.

ಇದು ವ್ಯವಸ್ಥಿತ ಸಮಸ್ಯೆಯಾಗಿದೆ. ಇದನ್ನು ವ್ಯವಸ್ಥಿತ ಮಟ್ಟದಲ್ಲಿ ಸರಿಪಡಿಸಲು ನೀವು ನಿಖರವಾಗಿ ಏನು ಮಾಡುತ್ತಿದ್ದೀರಿ ಎಂದು ರಾಹುಲ್,ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಪ್ರಧಾನ ಅವರನ್ನು ಪ್ರಶ್ನಿಸಿದರು.

ಅಸಮಾಧಾನಗೊಂಡಂತೆ ಕಂಡು ಬರುತ್ತಿದ್ದ ಪ್ರಧಾನ್, ಸದಸ್ಯರು ಪರೀಕ್ಷಾ ವ್ಯವಸ್ಥೆಯನ್ನು ನಿರರ್ಥಕ ಎಂದು ಬಣ್ಣಿಸಿದ್ದು ದುರದೃಷ್ಟಕರ ಎಂದು ಹೇಳಿದರು.

ವಿಷಯದ ಬಗ್ಗೆ ರಚನಾತ್ಮಕ ಚರ್ಚೆಗಳು ನಡೆಯಬೇಕು ಎಂದು ಒತ್ತಿ ಹೇಳಿದ ಸ್ಪೀಕರ್,ದೇಶದಲ್ಲಿಯ ಎಲ್ಲ ಪರೀಕ್ಷೆಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದರೆ ಅದು ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ವಿಶ್ವಾದ್ಯಂತ ಅದರ ಗ್ರಹಿಕೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದರು.

ಸ್ಪೀಕರ್ ಹೇಳಿಕೆಯ ಬಳಿಕ ರಾಹುಲ್ ಮಾತನಾಡಲು ಬಯಸಿದ್ದರಾದರೂ ಅದಕ್ಕೆ ಅನುಮತಿ ದೊರಕಲಿಲ್ಲ. ಇದನ್ನು ವಿರೋಧಿಸಿ ರಾಹುಲ್ ಹಾಗೂ ಟಿಎಂಸಿ ಮತ್ತು ಡಿಎಂಕೆ ಸೇರಿದಂತೆ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು. ಸದನದಲ್ಲಿ ಕಾಂಗ್ರೆಸ್ ಉಪನಾಯಕ ಗೌರವ ಗೊಗೊಯಿ ಅವರು ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ ಅವರೂ ಪ್ರಶ್ನೆಪತ್ರಿಕೆ ಸೋರಿಕೆಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದರು. ಸರಕಾರವು ಈ ವಿಷಯದಲ್ಲಿ ದಾಖಲೆಯನ್ನು ಸೃಷ್ಟಿಸಲಿದೆ ಎಂದರು.

ಆರಂಭದಲ್ಲಿ ಸದನವು ಜು.19ರಂದು ನಿಧನರಾದ ವಿಯೆಟ್ನಾಮ್‌ನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ನ್ಯುಯೆನ್ ಫು ಚಾಂಗ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು. ಅಗಲಿದ ಆತ್ಮಕ್ಕೆ ಗೌರವ ಸೂಚಕವಾಗಿ ಸದಸ್ಯರು ಮೌನವನ್ನು ಆಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News