ಸಂಸದೀಯ ನಿಯಮಾವಳಿಗಳ ಕುರಿತು ಸ್ಥಳೀಯ ಸಂಸ್ಥೆಗಳ 500ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿಗೆ ಕ್ಷಿಪ್ರ ತರಬೇತಿ
ಹೊಸದಿಲ್ಲಿ: ದೇಶಾದ್ಯಂತದ ಸ್ಥಳೀಯ ಸಂಸ್ಥೆಗಳ 500ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿಗೆ ಸಂವಿಧಾನ ಹಾಗೂ ಸಂಸದೀಯ ನಿಯಮಾವಳಿಗಳ ಕುರಿತು ಒಳನೋಟ ನೀಡುವ ಗುರಿ ಹೊಂದಿರುವ ‘ಪಂಚಾಯತಿಯಿಂದ ಸಂಸತ್ತಿನವರೆಗೆ 2.0” ಕಾರ್ಯಕ್ರಮಕ್ಕೆ ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ ನೀಡಲಿದ್ದಾರೆ.
ಆದಿವಾಸಿಗಳ ಹೆಮ್ಮೆಯ ಸಂಕೇತವಾದ ಬಿರ್ಸಾ ಮುಂಡಾರ 150ನೇ ಜನ್ಮದಿನಾಚರಣೆಯ ಸಮಾರೋಪದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವು ಕಾರ್ಯಾಗಾರ ಮತ್ತು ಉಪನ್ಯಾಸ ಅವಧಿಗಳು, ನೂತನ ಸಂಸತ್ ಭವನ, ಸಂವಿಧಾನ ಸದನ, ಪ್ರಧಾನ ಮಂತ್ರಿ ಸಂಗ್ರಹಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ಮಾರ್ಗದರ್ಶಿ ಪ್ರವಾಸವನ್ನು ಒಳಗೊಂಡಿದೆ. ಈ ಪ್ರಕ್ರಿಯೆ ಮೂಲಕ ಭಾರತದ ಶಾಸಕಾಂಗ ಪ್ರಕ್ರಿಯೆ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತು ಆಳವಾದ ಅರಿವು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಈ ಕಾರ್ಯಕ್ರಮವು 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬುಡಕಟ್ಟು ಸಮುದಾಯಗಳ 502 ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ಒಟ್ಟಾಗಿ ತರಲಿದ್ದು, ಆ ಮೂಲಕ ವೈವಿಧ್ಯಮಯ ಹಾಗೂ ಒಳಗೊಳ್ಳುವಿಕೆ ಗುಂಪನ್ನಾಗಿ ಖಾತರಿ ಪಡಿಸಲಿದೆ ಎಂದು ರವಿವಾರ ಲೋಕಸಭಾ ಕಾರ್ಯಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಕಾರ್ಯಕ್ರಮವು ಪಂಚಾಯತಿ ರಾಜ್ ಸಂಸ್ಥೆಗಳ ಮೂಲಕ ಚುನಾಯಿತರಾಗಿರುವ ಬುಡಕಟ್ಟು ಸಮುದಾಯಗಳ ಮಹಿಳಾ ಪ್ರತಿನಿಧಿಗಳ ಸಬಲೀಕರಣದ ಗುರಿ ಹೊಂದಿದ್ದು, ಸಾಂವಿಧಾನಿಕ ಅವಕಾಶಗಳು, ಸಂಸದೀಯ ವಿಧಾನಗಳು ಹಾಗೂ ಪರಿಣಾಮಕಾರಿ ನಾಯಕತ್ವವನ್ನು ಬೆಳೆಸುವಲ್ಲಿ ಆಡಳಿತದ ಪಾತ್ರದ ಕುರಿತು ಅವರಲ್ಲಿ ಅರಿವು ಹೆಚ್ಚಿಸುವ ದೂರದೃಷ್ಟಿಯನ್ನು ಹೊಂದಿದೆ.