ಮೊದಲ ಲೋಕಸಭಾ ಚುನಾವಣೆಯ ಬಳಿಕ ಏಳು ದಶಕಗಳಲ್ಲಿ ರಾಷ್ಟ್ರೀಯ ಪಕ್ಷಗಳ ಸಂಖ್ಯೆ 14ರಿಂದ 6ಕ್ಕೆ ಕುಸಿತ
ಹೊಸದಿಲ್ಲಿ: 1951ರಲ್ಲಿ ನಡೆದಿದ್ದ ಮೊದಲ ಲೋಕಸಭಾ ಚುನಾವಣೆಗಳಲ್ಲಿ 53 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಇಂದು ರಾಜಕೀಯ ಪಕ್ಷಗಳ ಸಂಖ್ಯೆ 2,500ನ್ನು ದಾಟಿದೆ, ಆದರೆ ಕಳೆದ ಏಳು ದಶಕಗಳಲ್ಲಿ ರಾಷ್ಟ್ರೀಯ ಪಕ್ಷಗಳ ಸಂಖ್ಯೆ 14ರಿಂದ 6ಕ್ಕೆ ಕುಸಿದಿದೆ.
18ನೇ ಲೋಕಸಭೆಯನ್ನು ಆಯ್ಕಮಾಡಲು ಮೇ ತಿಂಗಳಿನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಇತರ ಹಲವಾರು ಪಕ್ಷಗಳೊಂದಿಗೆ ಆರು ರಾಷ್ಟ್ರೀಯ ಪಕ್ಷಗಳು ಸ್ಪರ್ಧಿಸಲಿವೆ. ಈ ಎಲ್ಲ ವರ್ಷಗಳಲ್ಲಿ ವಿಲೀನದಿಂದ ಹೊಸ ಪಕ್ಷಗಳ ಉದಯದವರೆಗೆ ರಾಜಕೀಯ ಪಕ್ಷಗಳ ಪಯಣ ಆಸಕ್ತಿದಾಯಕವಾಗಿದೆ. ಕೆಲವು ಪಕ್ಷಗಳು ಈಗ ಅಸ್ತಿತ್ವದಲ್ಲಿಯೇ ಇಲ್ಲ.
ಮೊದಲ ಚುನಾವಣೆಯಲ್ಲಿ 53 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದು, ಅವುಗಳಲ್ಲಿ 14 ಪಕ್ಷಗಳನ್ನು ರಾಷ್ಟ್ರಿಯ ಪಕ್ಷಗಳು ಮತ್ತು ಉಳಿದವನ್ನು ರಾಜ್ಯ ಪಕ್ಷಗಳು ಎಂದು ಪರಿಗಣಿಸಲಾಗಿತ್ತು.
ಭಾರತದಲ್ಲಿ ಚುನಾವಣೆಗಳು ಸಾಗಿಬಂದ ದಾರಿಯನ್ನು ದಾಖಲಿಸಲು ಚುನಾವಣಾ ಆಯೋಗವು ಪ್ರಕಟಿಸಿದ ‘ಲೀಪ್ ಆಫ್ ಫೇತ್’ ಪುಸ್ತಕದ ಪ್ರಕಾರ 1953ರ ಚುನಾವಣೆಗೆ ಮುನ್ನ 29 ರಾಜಕೀಯ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕಾಗಿ ಆಗ್ರಹಿಸಿದ್ದವು. ಆದರೆ 14 ಪಕ್ಷಗಳಿಗೆ ಮಾತ್ರ ಈ ಸ್ಥಾನಮಾನವನ್ನು ನೀಡಲಾಗಿತ್ತು. ಚುನಾವಣಾ ಫಲಿತಾಂಶಗಳು ಹೆಚ್ಚಿನ ಪಕ್ಷಗಳ ಪಾಲಿಗೆ ನಿರಾಶಾದಾಯಕವಾಗಿದ್ದವು ಮತ್ತು ಕಾಂಗ್ರೆಸ್, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್‌ಪಿ), ಸಿಪಿಐ ಮತ್ತು ಜನಸಂಘ; ಹೀಗೆ ಕೇವಲ ನಾಲ್ಕು ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಉಳಿಸಿಕೊಂಡಿದ್ದವು.
ಅಖಿಲ ಭಾರತೀಯ ಹಿಂದು ಮಹಾಸಭಾ (ಎಚ್‌ಎಂಎಸ್), ಅಖಿಲ ಭಾರತೀಯ ಜನಸಂಘ (ಬಿಜೆಎಸ್),ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ), ಆಲ್ ಇಂಡಿಯಾ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಷನ್ (ಎಸ್‌ಸಿಎಫ್),ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಮಾಕ್ಸ್‌ವಾದಿ ಗುಂಪು(ಎಫ್‌ಬಿಎಲ್-ಎಂಜಿ),ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ರುಯಿಕರ್ ಗುಂಪು(ಎಫ್‌ಬಿಎಲ್-ಆರ್‌ಜಿ),ಕೃಷಿಕರ ಲೋಕ ಪಾರ್ಟಿ (ಕೆಎಲ್‌ಪಿ),ಬೊಲ್ಶೆವಿಕ್ ಪಾರ್ಟಿ ಆಫ್ ಇಂಡಿಯಾ (ಬಿಪಿಐ) ಮತ್ತು ರೆವೊಲ್ಯೂಷನರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಆರ್‌ಸಿಪಿಐ); ಇವು ರಾಷ್ಟ್ರೀಯ ಸ್ಥಾನಮಾನವನ್ನು ಕಳೆದುಕೊಂಡಿದ್ದ ಪಕ್ಷಗಳಾಗಿದ್ದವು.
1957ರಲ್ಲಿ ಎರಡನೇ ಲೊಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ 15ಕ್ಕೆ ಇಳಿಕೆಯಾಗಿದ್ದು,ನಾಲ್ಕು ರಾಷ್ಟ್ರೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದವು. ಆದರೆ 1962ರ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಸಂಖ್ಯೆ 27ಕ್ಕೇರಿತ್ತು ಮತ್ತು ಸೋಷಿಯಲಿಸ್ಟ್ (ಎಸ್‌ಒಸಿ) ಮತ್ತು ಸ್ವತಂತ್ರ (ಎಸ್‌ಡಬ್ಲ್ಯುಎ) ಪಾರ್ಟಿಗಳ ಸೇರ್ಪಡೆಯೊಂದಿಗೆ ರಾಷ್ಟ್ರೀಯ ಪಕ್ಷಗಳ ಸಂಖ್ಯೆ ಆರಕ್ಕೇರಿತ್ತು.
ಮೊದಲ ಚುನಾವಣೆಯ ಬಳಿಕ ಬಹುಕಾಲದವರೆಗೂ ಕಾಂಗ್ರೆಸ್‌ನ ಪ್ರಾಬಲ್ಯವು ಮುಂದುವರಿದಿತ್ತು. 2014ರವರೆಗೆ 14 ಚುನಾವಣೆಗಳಲ್ಲಿ 11ನ್ನು ಅದು ಗೆದ್ದಿತ್ತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೇರಿತ್ತು.
1951ರ ನಂತರ ಮುಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಸಿಪಿಐ ಪ್ರಮುಖ ಪ್ರತಿಪಕ್ಷವಾಗಿತ್ತು. ಆದರೆ 1964ರಲ್ಲಿ ಪಕ್ಷವು ಸೋವಿಯತ್ ಯೂನಿಯನ್ ಮತ್ತು ಚೀನಿ ಕಮ್ಯುನಿಸ್ಟ್ ಬಣಗಳಾಗಿ ಒಡೆದಿತ್ತು ಮತ್ತು ಸಿಪಿಐ (ಮಾಕ್ಸ್‌ವಾದಿ) ಅಸ್ತಿತ್ವಕ್ಕೆ ಬಂದಿತ್ತು. ಅದರ ನಂತರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಿಪಿಐ (ಎಂ) ಸಿಪಿಐಗಿಂತ ಹೆಚ್ಚು ಮತಗಳನ್ನು ಗಳಿಸುತ್ತಲೇ ಬಂದಿದೆ.
1970ರ ದಶಕದಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ಜಯಪ್ರಕಾಶ ನಾರಾಯಣ ಅವರು 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಜೈಲಿಗೆ ತಳ್ಳಲ್ಪಟ್ಟಿದ್ದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ನಾರಾಯಣ ಮತ್ತು ಇತರ ಪಿಎಸ್‌ಪಿ ನಾಯಕರು ಹಲವಾರು ಇತರ ಗುಂಪುಗಳೊಂದಿಗ ಸೇರಿ ಭಾರತೀಯ ಲೋಕದಳವನ್ನು ಸ್ಥಾಪಿಸಿದ್ದರು. ತುರ್ತು ಪರಿಸ್ಥಿತಿಯ ಬಳಿಕ 1977ರಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್‌ನ್ನು ವಿರೋಧಿಸಲು ದೇಶದಲ್ಲಿಯ ಇಡೀ ಪ್ರತಿಪಕ್ಷವು ಜನತಾ ಪಾರ್ಟಿಯ ಹೆಸರಿನಲ್ಲಿ ಒಂದಾಗಿತ್ತು. ಬಿಜೆಪಿ, ಸಮಾಜವಾದಿ ಪಾರ್ಟಿ ಸೇರಿದಂತೆ ಇಂದಿನ ಹಲವಾರು ಪಕ್ಷಗಳು ಇದೇ ಜನತಾ ಪಾರ್ಟಿಯಲ್ಲಿ ತಮ್ಮ ಮೂಲಬೇರುಗಳನ್ನು ಹೊಂದಿವೆ.
1992ರ ಲೋಕಸಭಾ ಚುನಾವಣೆಗಳಲ್ಲಿ ಈವರೆಗಿನ ಕನಿಷ್ಠ ಸಂಖ್ಯೆಯ ಪಕ್ಷಗಳು ಕಣದಲ್ಲಿದ್ದವು. ಈ ಪೈಕಿ ಬಿಜೆಪಿ,ಕಾಂಗ್ರೆಸ್,ಸಿಪಿಐ,ಸಿಪಿಎಂ,ಜನತಾ ದಳ,ಜನತಾ ಪಾರ್ಟಿ ಮತ್ತು ಲೋಕದಳ;ಹೀಗೆ ಏಳು ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿದ್ದವು.
1996ರ ಸಾರ್ವತ್ರಿಕ ಚುನವಣೆಗಳಲ್ಲಿ 209 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದು,ಈ ಪೈಕಿ ಎಂಟು ರಾಷ್ಟ್ರೀಯ ಪಕ್ಷಗಳಾಗಿದ್ದವು. 1997ರ ಚುನಾವಣೆಗಳಲ್ಲಿ ಇವುಗಳ ಸಂಖ್ಯೆ ಅನುಕ್ರಮವಾಗಿ 176 ಮತ್ತು ಏಳು ಆಗಿತ್ತು. 1999ರಲ್ಲಿ 160 ರಾಜಕೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದು, ಏಳು ರಾಷ್ಟ್ರೀಯ ಪಕ್ಷಗಳಾಗಿದ್ದವು.
2014ರಲ್ಲಿ 464 ಪಕ್ಷಗಳು ಚುನಾವಣಾ ಕಣದಲ್ಲಿದ್ದು, ಬಿಜೆಪಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಎನ್‌ಸಿಪಿ ಮತ್ತು ಬಿಎಸ್‌ಪಿ ಇವು ರಾಷ್ಟ್ರೀಯ ಪಕ್ಷಗಳಾಗಿದ್ದವು.
2016ರಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಿದ್ದ ಟಿಎಂಸಿ 2019ರ ಚುನಾವಣೆಗಳಲ್ಲಿ ಹೊಸ ಸ್ಥಾನಮಾನದೊಂದಿಗೆ ಸ್ಪರ್ಧಿಸಿತ್ತು.
2019ರ ಚುನಾವಣೆಗಳಲ್ಲಿ ಒಟ್ಟು 674 ಪಕ್ಷಗಳು ಕಣದಲ್ಲಿದ್ದರೆ,ಈ ಪೈಕಿ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಐ, ಸಿಪಿಎಂ,ಎನ್‌ಸಿಪಿ ಮತ್ತು ಟಿಎಂಸಿ ಏಳು ರಾಷ್ಟ್ರೀಯ ಪಕ್ಷಗಳಾಗಿದ್ದವು. ಆದರೆ ಚುನಾವಣೆಗಳ ಬಳಿಕ ಟಿಎಂಸಿ,ಎನ್‌ಸಿಪಿ ಮತ್ತು ಸಿಪಿಐ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದ್ದವು.
ನಿಯಮಗಳಂತೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ರಾಜಕೀಯ ಸಂಘಟನೆಯು ಮೂರು ವಿಭಿನ್ನ ರಾಜ್ಯಗಳಲ್ಲಿ ಲೋಕಸಭೆಯ ಒಟ್ಟು ಸ್ಥಾನಗಳ ಕನಿಷ್ಠ ಶೇ.2ರಷ್ಟು ಸ್ಥಾನಗಳನ್ನು ಗೆದ್ದಿರಬೇಕು ಅಥವಾ ನಾಲ್ಕು ರಾಜ್ಯಗಳಲ್ಲಿ ನಾಲ್ಕು ಲೋಕಸಭಾ ಸ್ಥಾನಗಳ ಜೊತೆಗೆ ಕನಿಷ್ಠ ಶೇ.6ರಷ್ಟು ಮತಗಳನ್ನು ಗಳಿಸಿರಬೇಕು ಅಥವಾ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಮಾನ್ಯತೆಯನ್ನು ಹೊಂದಿರಬೇಕು.
ಕಳೆದ ವರ್ಷ ಆಪ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಿದ್ದು,ಇದು 2024ರ ಚುನಾವಣೆಗಳಿಗೆ ಮುನ್ನ ಅದಕ್ಕೆ ಹೆಚ್ಚಿನ ಉತ್ಸಾಹವನ್ನು ನೀಡಿದೆ.
ದೇಶದಲ್ಲಿ ಈಗ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಆಪ್ ಹೀಗೆ ಆರು ರಾಷ್ಟ್ರೀಯ ಪಕ್ಷಗಳಿವೆ.