ಸುಪ್ರೀಂಕೋರ್ಟ್‌ ತೀರ್ಪಿನ ನಂತರ ತಲಾ 5 ಅಂಕಗಳನ್ನು ಕಳೆದುಕೊಳ್ಳಲಿರುವ 4 ಲಕ್ಷಕ್ಕೂ ಅಧಿಕ ನೀಟ್‌ ಅಭ್ಯರ್ಥಿಗಳು

Update: 2024-07-24 11:21 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ನೀಟ್‌ ಭೌತಶಾಸ್ತ್ರ ವಿಭಾಗದಲ್ಲಿನ ವಿವಾದಿತ ಪ್ರಶ್ನೆಯೊಂದಕ್ಕೆ ಒಂದೇ ಸರಿಯಾದ ಉತ್ತರವಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದ ನಂತರ ಈಗ ಪರೀಕ್ಷೆಗೆ ಹಾಜರಾದ 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಒಟ್ಟು ಅಂಕಗಳಿಂದ ತಲಾ ಐದು ಅಂಕಗಳನ್ನು ಕಳೆದುಕೊಳ್ಳಲಿದ್ದಾರೆ.

ದಿಲ್ಲಿ ಐಐಟಿಯ ತಜ್ಞರ ತಂಡ ಗುರುತಿಸಿದ ಸರಿಯಾದ ಉತ್ತರದ ಆಧಾರದ ಮೇಲೆ ಫಲಿತಾಂಶಗಳನ್ನು ಪರಿಷ್ಕರಿಸುವಂತೆ ನ್ಯಾಷನಲ್‌ ಟೆಸ್ಟಿಂಗ್‌ ಏಜನ್ಸಿಗೆ ಸುಪ್ರೀಂ ಕೋರ್ಟ್‌ ಹೇಳಿದೆ.

ಶೇ 100 ಅಂಕಗಳನ್ನು ಪಡೆದ 61 ವಿದ್ಯಾರ್ಥಿಗಳ ಪೈಕಿ 44 ಮಂದಿಯ ಮೇಲೆಯೂ ಸುಪ್ರಿಂ ಕೋರ್ಟ್‌ನ ಆದೇಶ ಪರಿಣಾಮ ಬೀರಲಿದೆ.

ಭೌತಶಾಸ್ತ್ರ ವಿಭಾಗದಲ್ಲಿ ಮಲ್ಟಿಪಲ್‌ ಚಾಯ್ಸ್‌ ಪ್ರಶ್ನೆಯೊಂದಕ್ಕೆ ಎರಡು ಆಯ್ಕೆಗಳು ಸರಿಯಾದ ಉತ್ತರಗಳೆಂದು ನ್ಯಾಷನಲ್‌ ಟೆಸ್ಟಿಂಗ್‌ ಏಜನ್ಸಿ ಈ ಹಿಂದೆ ಪರಿಗಣಿಸಿತ್ತು.

ಪರೀಕ್ಷೆಗೆ ಸಿದ್ಧತೆ ನಡೆಸಲು ಹಲವು ಅಭ್ಯರ್ಥಿಗಳು ಹಳೆಯ ಪಠ್ಯಪುಸ್ತಕಗಳನ್ನು ಬಳಸಿದ್ದರು ಎಂಬ ಕುರಿತು ಎನ್‌ಟಿಎಗೆ ಹಲವರು ತಿಳಿಸಿದ ನಂತರ ಎರಡು ಉತ್ತರಗಳನ್ನು ಸರಿ ಎಂದು ಪರಿಗಣಿಸಲಾಗಿತ್ತು ಎಂದು ಕೇಂದ್ರ ಮತ್ತು ಏಜನ್ಸಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದರು.

ಆದರೆ ಐಐಟಿ ದಿಲ್ಲಿ ತಜ್ಞರು ಒಂದು ಉತ್ತರ ಮಾತ್ರ ಸರಿ ಎಂದು ಹೇಳಿದ್ದರೆಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಹಾಗೂ ಮನೋಜ್‌ ಮಿಶ್ರಾ ಹೇಳಿದರು.

ಮಂಗಳವಾರದ ವಿಚಾರಣೆ ವೇಳೆ ನ್ಯಾಯಾಲಯ ಮರುಪರೀಕ್ಷೆ ನಡೆಸಲು ನಿರಾಕರಿಸಿತ್ತಲ್ಲದೆ ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಮಟ್ಟದಲ್ಲಿ ನಡೆದಿತ್ತು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News