ಶಾಸಕ ರಾಜಾ ಸಿಂಗ್ ಅಮಾನತು ರದ್ದುಪಡಿಸಿದ ಬಿಜೆಪಿ: ಪ್ರಧಾನಿ ಮೋದಿ ವಿರುದ್ಧ ಉವೈಸಿ ಆಕ್ರೋಶ
ಹೈದರಾಬಾದ್: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಳೆದ ವರ್ಷ ಪಕ್ಷದಿಂದ ಅಮಾನತ್ತಾಗಿದ್ದ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತು ರದ್ದುಗೊಳಿಸಿದ್ದಕ್ಕಾಗಿ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯಲ್ಲಿ ದ್ವೇಷದ ಮಾತುಗಳು ಭಡ್ತಿಗೆ ಅತ್ಯಂತ ವೇಗವಾದ ಮಾರ್ಗ ಎಂದು ಅವರು ಆರೋಪಿಸಿದ್ದಾರೆ.
"ಮೋದಿಯ ಬಿಜೆಪಿಯಲ್ಲಿ ಭಡ್ತಿಗೆ ದ್ವೇಷ ಭಾಷಣವು ಅತ್ಯಂತ ವೇಗವಾದ ಮಾರ್ಗವಾಗಿದೆ" ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಹೈದರಾಬಾದ್‌ನ ಗೋಶಾಮಹಲ್‌ನ ಶಾಸಕ ರಾಜಾ ಸಿಂಗ್ ಅವರ ಅಮಾನತು ರದ್ದುಗೊಳಿಸಿದ ಬಿಜೆಪಿ ನಾಯಕತ್ವವು, ಪಕ್ಷವು ಈ ಹಿಂದೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ನೀಡಿದ ವಿವರಣೆಯನ್ನು ಪರಿಗಣಿಸಿದೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ರವಿವಾರ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ರಾಜಾ ಸಿಂಗ್ ಅವರು "ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್" ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಬಳಿಕ ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ತೆಲಂಗಾಣ ಹೈಕೋರ್ಟ್ ನವೆಂಬರ್ 2022 ರಲ್ಲಿ ಅವರ ವಿರುದ್ಧದ ಪಿಡಿ ಕಾಯ್ದೆಯನ್ನು ರದ್ದುಗೊಳಿಸಿ ಅವರಿಗೆ ಜಾಮೀನು ನೀಡಿತ್ತು.
ತಮ್ಮ ಅಮಾನತು ಹಿಂಪಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಕಿಶನ್ ರೆಡ್ಡಿ ಮತ್ತು ಇತರ ರಾಜ್ಯ ನಾಯಕರಿಗೆ ರಾಜಾ ಸಿಂಗ್ ಅವರು ವೀಡಿಯೊ ಸಂದೇಶದಲ್ಲಿ ಧನ್ಯವಾದ ತಿಳಿಸಿದ್ದಾರೆ.