ಪದ್ಮಶ್ರೀ ಪುರಸ್ಕೃತ ಸಾವಯವ ರೈತ ಮಹಿಳೆ ಪಪ್ಪಮ್ಮಾಳ್ ನಿಧನ
ಕೊಯಂಬತ್ತೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಸಾವಯವ ರೈಷಿಕರಾದ ಆರ್.ಪಪ್ಪಮ್ಮಾಳ್ ವಯೋಸಹಜ ಕಾಯಿಲೆಯಿಂದ ಶುಕ್ರವಾರ ರಾತ್ರಿ ಮೆಟ್ಟುಪಾಳ್ಯಂ ಬಳಿಯ ತೆಕ್ಕಂಪಟ್ಟಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಅವರಿಗೆ 108 ವರ್ಷ ವಯಸ್ಸಾಗಿತ್ತು.
ಕೃಷಿಕರ ಕುಟುಂಬದಲ್ಲಿ ಜನಿಸಿದ್ದ ಪಪ್ಪಮ್ಮಾಳ್, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹಿಳೆಯ ಸಬಲೀಕರಣಕ್ಕೆ ನಿದರ್ಶನವಾಗಿದ್ದರು. 1959ರಲ್ಲಿ ಅವರು ತೆಕ್ಕಂಪಟ್ಟಿ ಪಂಚಾಯತಿ ವಾರ್ಡ್ ನ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದಾದ ನಂತರ, ಅವರು ತೆಕ್ಕಂಪಟ್ಟಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು. ಪಪ್ಪಮ್ಮಾಳ್ ಅವರು ಹಲವಾರು ದಶಕಗಳಿಂದ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ರೈತರ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು.
ಪಪ್ಪಮ್ಮಾಳ್ ತಮಗೆ ನೂರು ವರ್ಷ ದಾಟಿದರೂ ತಮ್ಮ 2.5 ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಪ್ಪಮ್ಮಾಳ್ ತಾವೊಬ್ಬರೇ ಬಹುತೇಕ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ. ಪಪ್ಪಮ್ಮಾಳ್ ಸಾವಯವ ಕೃಷಿಯ ಪ್ರಬಲ ಪ್ರತಿಪಾದಕರಾಗಿದ್ದರು. “ಅವರು ರೈತರಿಗೆ ಮತ್ತು ಯುವಜನರಿಗೆ ಮಾದರಿಯಾಗಿದ್ದರು” ಎಂದು ತೆಕ್ಕಂಪಟ್ಟಿ ಗ್ರಾಮದ ದಿಲೀಪ್ ಕುಮಾರ್ ಆರ್. ಶ್ಲಾಘಿಸುತ್ತಾರೆ.
ಪಪ್ಪಮ್ಮಾಳ್ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.