ಪಂಡೋರಾ ಪೇಪರ್ಸ್ ಲೀಕ್: ಗೋವಾದ ಗಣಿ ಉದ್ಯಮಿಯ ಪುತ್ರನ 26.80 ಕೋಟಿ ರೂ. ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ: ಭಾರತದ ಹೊರಗೆ ಗೋವಾ ಮೂಲದ ಗಣಿ ಉದ್ಯಮಿಯೊಬ್ಬರ ಪುತ್ರನ ಅಘೋಷಿತ ವಿದೇಶಿ ವಿನಿಮಯದ ಸಂಗ್ರಹದ ವಿವರಗಳನ್ನು ‘ಪಂಡೋರಾ ಪೇಪರ್ಸ್ ’ ಬಹಿರಂಗಡಿಸಿದ ಬಳಿಕ ನಡೆಯುತ್ತಿರುವ ತನಿಖೆಯ ಭಾಗವಾಗಿ, ಆತನ 36.80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿರುವುದಾಗಿ ಜಾರಿ ನಿರ್ದೇಶನಾಲಯ (E.D.) ಶನಿವಾರ ತಿಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ)ಯ ಸೆಕ್ಷನ್ 37ಎ ಅಡಿ, ರೋಹನ್ ಟಿಂಬ್ಲೊ ವಿರುದ್ಧ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.
ರೋಹನ್ ಟಿಂಬ್ಲೊ ಅವರು ಗೋವಾ ಮೂಲದ ಗಣಿ ಉದ್ಯಮಿ ರಾಧಾ ಟಿಂಬ್ಲೊ ಅವರ ಪುತ್ರ ಎಂದು ಏಜೆನ್ಸಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ತನಿಖಾ ಪತ್ರಿಕೋದ್ಯಮಿಗಳ ಸಂಘಟನೆಯು (ಐಸಿಐಜೆ) 2021ರಲ್ಲಿ ಪ್ರಕಟಿಸಿದ ಪಂಡೋರಾಪೇಪರ್ಸ್ ದಾಖಲೆಗಳ ಭಾರತೀಯ ಮೂಲ ಹಲವಾರು ಉದ್ಯಮಿಗಳು ಸೇರಿದಂತೆ 200ಕ್ಕೂ ಅಧಿಕ ದೇಶಗಳ ಅತಿ ಸಿರಿವಂತರು ಸಾಗರೋತ್ತರ ದೇಶಗಳಲ್ಲಿ ಕೂಡಿಹಾಕಿರುವ ಸಂಪತ್ತಿನ ವಿವರಗನ್ನು ಸೋರಿಕೆ ಮಾಡಿತ್ತು.
ರೋಹನ್ ಟಿಂಬ್ಲೊ ಅವರು ಸಾಗರೋತ್ತರ ದೇಶದಲ್ಲಿ ಕೌಟುಂಬಿಕ ಟ್ರಸ್ಟ್ ಹಾಗೂ ಅದರ ಅಧೀನದಲ್ಲಿರುವ ಮೂರು ಕಾರ್ಪೊರೇಟ್ ಸಂಸ್ಥೆಗಳ ಮಾಲಕತ್ವವನ್ನು ಹೊಂದಿರುವುದು ಸಿಂಗಾಪುರದ ಇನ್ಲ್ಯಾಂಡ್ ಕಂದಾಯ ಪ್ರಾಧಿಕಾರ (ಐಆರ್ಎಎಸ್)ದ ನಿಗಾಣೆಗೆ ಬಂದಿದೆ.
ರೋಹನ್ ಟಿಂಬ್ಲೊ ಅವರು ಕೊಲಾರೆಸ್ ಟ್ರಸ್ಟ್ ನ ಏಕೈಕ ಟ್ರಸ್ಟಿ ಆಗಿದ್ದು, ಅದು ಎಸಿಯಾಸಿಟಿ ಟ್ರಸ್ಟ್ ಸಿಂಗಾಪೂರ್ ಪ್ರೈ. ಲಿಮಿಟೆಡ್ ಗೆ ಕಾರ್ಪೊರೇಟ್ ಟ್ರಸ್ಟಿ ಸೇವೆಗಳನ್ನು ಒದಗಿಸಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಕೊಲಾರೆಸ್ ಟ್ರಸ್ಟ್ ತನ್ನ ಅಧೀನದಲ್ಲಿ ಕ್ಯಾಲೆಹೆಟಾ ಹೋಲ್ಡಿಂಗ್ಸ್ ಲಿಮಿಟೆಡ್, ಸಮೊವಾ, ಕ್ಯಾಝಾರ್ ಫೈನಾನ್ಸ್ ಎಸ್.ಎ., ಬಿವಿಐ ಹಾಗೂ ಕೊರಿಲಸ್ ಆಸೆಟ್ಸ್ ಹೀಗೆ ಮೂರು ಕಾರ್ಪೊರೇಟ್ ಟ್ರಸ್ಟ್ ಗಳನ್ನು ಹೊಂದಿದೆ.
2012ರಲ್ಲಿ ಕೊಲಾರೆಸ್ ಟ್ರಸ್ಟ್ ನ ಬಂಡವಾಳ ನಿಧಿಯು 4,499.620 ಡಾಲರ್ ಆಗಿತ್ತು. ಆದರೆ ಈ ವಿವರಗಳನ್ನು ರೋಹನ್ ಟಿಂಬ್ಲೊ ಅವರು ಭಾರತೀಯ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿರಲಿಲ್ಲ ವೆಂದು ಜಾರಿ ನಿರ್ದೇಶಾಲಯ ಆಪಾದಿಸಿದೆ.
ವಿದೇಶಿ ವಿನಿಮಯ ಕಾಯ್ದೆ 1999ರ ಸೆಕ್ಷನ್4ರ ನಿಯಮಾವಳಿಗಳನ್ನು ಉಲ್ಲಂಘಿಸುವ ಮೂಲಕ ರೋಹನ್ ಟಿಂಬ್ಲೊ ಅವರು ಸುಮಾರು 37,34,68,460 ರೂ. ಮೊತ್ತದ ಹಣವನ್ನು ಸಂಗ್ರಹಿಸಿದಕ್ಕಾಗಿ ರೋಹನ್ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು ಹಾಗೂ ಅವರಿಂದ ಚರಾಸ್ತಿಯನ್ನು ಜಪ್ತಿ ಮಾಡಲಾಗಿತ್ತು.