ಪನ್ನೂನ್ ಹತ್ಯೆ ಸಂಚು: ನಿಖಿಲ್ ಗುಪ್ತಾ ಅಮೆರಿಕಕ್ಕೆ ಗಡೀಪಾರು
ಹೊಸದಿಲ್ಲಿ: ಅಮೆರಿಕ ನಿವಾಸಿ ಮತ್ತು ಸಿಕ್ಖ್ ಪ್ರತ್ಯೆಕತಾವಾದಿ ಮುಖಂಡ ಗುರುಪ್ರೀತ್ ಸಿಂಗ್ ಪನ್ನೂನ್ ಹತ್ಯೆ ಸಂಚಿನ ಆರೋಪಿ ಭಾರತದ ನಿಖಿಲ್ ಗುಪ್ತಾ (52) ಎಂಬಾತನನ್ನು ಜೆಕ್ ಗಣರಾಜ್ಯ, ಅಮೆರಿಕಕ್ಕೆ ಗಡೀಪಾರು ಮಾಡಿದೆ. ಪ್ರಸ್ತುತ ಗುಪ್ತಾನನ್ನು ಬ್ರೂಕ್ಲಿನ್‍ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ ಕಾರಾಗೃಹದಲ್ಲಿ ಇಡಲಾಗಿದೆ ಎಂದು ಫೆಡರಲ್ ಬ್ಯೂರೊ ಆಫ್ ಪ್ರಿಸನರ್ಸ್ ವೆಬ್‍ಸೈಟ್‍ನಿಂದ ತಿಳಿದುಬಂದಿದೆ.
ಪನ್ನೂನ್ ಹತ್ಯೆ ಮಾಡುವ ವಿಫಲ ಸಂಚಿನಲ್ಲಿ ಗುಪ್ತಾ ಅರೋಪಿಯಾಗಿರಬೇಕು ಎಂದು ಅಮೆರಿಕದ ಅಧಿಕಾರಿಗಳು ಶಂಕಿಸಿದ್ದಾರೆ.
ಭಾರತೀಯ ಅಧಿಕಾರಿಗಳ ಜತೆ ಷಾಮೀಲಾದ ಗುಪ್ತಾ ಈ ಸಂಚು ರೂಪಿಸಿದ್ದ ಎಂದು ಅಮೆರಿಕದ ಫೆಡರಲ್ ಅಭಿಯೋಜಕರು ಆಪಾದಿಸಿದ್ದಾರೆ. ಕಳೆದ ವರ್ಷದ ಜೂನ್‍ನಲ್ಲಿ ಗುಪ್ತಾ, ಭಾರತದಿಂದ ಪರುಗ್ವೇಗೆ ಪ್ರಯಾಣಿಸಿದ್ದ. ಅಲ್ಲಿ ಜೆಕ್ ಅಧಿಕಾರಿಗಳು ಆತನನ್ನು ಬಂಧಿಸಿದ್ದರು. ಗಡೀಪಾರಿನಿಂದ ತಪ್ಪಿಸಿಕೊಳ್ಳಲು ಮನವಿ ಮಾಡಿಕೊಂಡರೂ, ಜೆಕ್ ಕೋರ್ಟ್ ಆತನ ಮನವಿಯನ್ನು ಕಳೆದ ತಿಂಗಳು ತಿರಸ್ಕರಿಸಿತ್ತು. ಇದರಿಂದಾಗಿ ಜೆಕ್ ನ್ಯಾಯ ಸಚಿವವರು ಈತನನ್ನು ಅಮೆರಿಕಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಿತು.
ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿ ಮಾಡಿ ಅಮೆರಿಕ ಮತ್ತು ಕೆನಡಾದಲ್ಲಿ ಸಂಚು ರೂಪಿಲಾಗಿದೆ ಎಂಬ ಆರೋಪ, ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹಳಸಲು ಕಾರಣವಾಗಿತ್ತು. ಆದರೆ ಭಾರತ ಸರ್ಕಾರ ಈ ಸಂಚಿನಲ್ಲಿ ಷಾಮೀಲಾಗಿರುವುದನ್ನು ನಿರಾಕರಿಸಿತ್ತು.