ಸಂಸತ್‌ ನಲ್ಲಿ ಭಾರೀ ಭದ್ರತಾ ಉಲ್ಲಂಘನೆ ಪ್ರಕರಣ: ಸುಟ್ಟು ಕರಕಲಾದ ಮೊಬೈಲ್ ಫೋನ್ ಗಳ ಅವಶೇಷಗಳು ವಶಕ್ಕೆ

Update: 2023-12-17 16:08 GMT

Photo : Twitter | ANI

ಹೊಸದಿಲ್ಲಿ: ಸಂಸತ್ ಭವನದಲ್ಲಿ ಭಾರೀ ಭದ್ರತಾ ಉಲ್ಲಂಘನೆಯ ಘಟನೆ ನಡೆದ ನಾಲ್ಕು ದಿನಗಳ ಆನಂತರ ದಿಲ್ಲಿ ಪೊಲೀಸರು ರಾಜಸ್ಥಾನದ ನಾಗಪುರದಲ್ಲಿ ಕೆಲವು ತುಂಡಾಗಿರುವ ಹಾಗೂ ಸುಟ್ಟುಕರಕಲಾದ ಮೊಬೈಲ್ ಫೋನ್ ಗಳ ಅವಶೇಷಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ದಾಖಲಿಸಲಾದ ಎಫ್ಐಆರ್ ನಲ್ಲಿ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಭಾರತೀಯ ದಂಡಸಂಹಿತೆಯ ಸೆಕ್ಷನ್‌ ಗಳನ್ನು ಪೊಲೀಸರು ಸೇರ್ಪಡೆಗೊಳಿಸಿದ್ದಾರೆ.

ಸಂಸತ್‌ ಭವನ ಹೊಗೆಬಾಂಬ್ ಘಟನೆಗೆ ಸಂಬಂಧಿಸಿ ಬಂಧಿತರಾದ 6 ಆರೋಪಿಗಳಲ್ಲಿ ಒಬ್ಬನಾದ ಆರೋಪಿ ಲಲಿತ್ ಝಾ ನೀಡಿದ ಮಾಹಿತಿಯಂತೆ ಸುಟ್ಟುಹಾಕಲಾದ ಮೊಬೈಲ್ ಫೋನ್‌ ಗಳ ಕೆಲವು ತುಣುಕುಗಳನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.

ದಿಲ್ಲಿ ಪೊಲೀಸರ ವಿಶೇಷ ಸೆಲ್ ನ ತಂಡವೊಂದು ಶನಿವಾರ ಝಾನನ್ನು ರಾಜಸ್ತಾನದ ನಾಗಪುರಕ್ಕೆ ಕೊಂಡೊಯ್ದು ವಿಚಾರಣೆ ನಡೆಸಿದೆ. ಅಲ್ಲಿ ಆತ ಆರೋಪಿ ಮಹೇಶ್ ಕುಮಾವತ್‌ ನ ಸಹಾಯದೊಂದಿಗೆ ವಾಸ್ತವ್ಯವನ್ನು ಹೂಡಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 12ರಂದು ದಾಖಲಾದ ಎಫ್ಐಆರ್ ನಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕಠಿಣವಾದ, ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ ಭಯೋತ್ಪಾದನೆ ಆರೋಪಗಳನ್ನು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಪುರಾವೆಗಳನ್ನು ಮುಚ್ಚಿಹಾಕಲು ಝಾ ಹಾಗೂ ಕುಮಾವತ್ ಉದ್ದೇಶಪೂರ್ವಕವಾಗಿ ಮೊಬೈಲ್ ಫೋನ್‌ ಗಳನ್ನು ನಾಶಪಡಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್‌ ಭವನದಲ್ಲಿ ಭದ್ರತಾ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಈವರೆಗೆ ಸಾಗರ್ ಶರ್ಮಾ, ಮನೋರಂಜನ್ ಡಿ., ಅಮೋಲ್ ಶಿಂಧೆ, ನೀಲಂ ದೇವಿ , ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಸಾಗರ್ ಶರ್ಮಾ ಹಾಗೂ ಮನೋರಂಜನ್ ಡಿ., ಅವರು ಲೋಕಭೆ. ವೀಕ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು, ಹೊಗೆಬಾಂಬ್ ಸಿಡಿಸುವ ಮೂಲಕ ಆತಂಕ ಸೃಷ್ಟಿಸಿದ್ದರು.

ಇದೇ ಸಮಯದಲ್ಲಿ ಇನ್ನಿಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಹಾಗೂ ನೀಲಂ ದೇವಿ ಅವರು ಸಂಸತ್‌ ಭವನದ ಆವರಣದ ಹೊರಗೆ ಹೊಗೆಬಾಂಬ್ ಗಳನ್ನು ಸಿಡಿಸಿ ‘ ಸರ್ವಾಧಿಕಾರ ನಡೆಯದು’ ಎಂಬ ಘೋಷಣೆಗಳನ್ನು ಕೂಗಿದ್ದರು.

ಇನ್ನೋರ್ವ ಆರೋಪಿ ಲಲಿತ್ ಝಾ, ಈ ಕೃತ್ಯವನ್ನು ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದನು. ಆನಂತರ ಆತ ರಾಜಸ್ತಾನದ ನಾಗಪುರಕ್ಕೆ ತೆರಳಿದ್ದನು. ಅಲ್ಲಿ ಆತನಿಗೆ ಸೋದರ ಸಂಬಂಧಿಗಳಾದ ಕುಮಾವತ್ ಹಾಗೂ ಕೈಲಾಶ್ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News