ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸುಪ್ರೀಂ ತರಾಟೆ ಬೆನ್ನಲ್ಲೇ ಕ್ಷಮೆಯಾಚಿಸಿದ ಪತಂಜಲಿ
ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳು ಮತ್ತು ಅವುಗಳ ವೈದ್ಯಕೀಯ ಪರಿಣಾಮಕತ್ವದ ಕುರಿತಂತೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹಾಗೂ ಯೋಗ ಗುರು ರಾಮದೇವ್ ಅವರ ಓರ್ವ ಸಹಾಯಕ ಸುಪ್ರೀಂ ಕೋರ್ಟಿನಿಂದ ಕ್ಷಮೆಯಾಚಿಸಿದ್ಧಾ ರೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ನೋಟಿಸಿಗೆ ಪ್ರತಿಕ್ರಿಯಿಸದೇ ಇದ್ದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಎಪ್ರಿಲ್ 2ರಂದು ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಅವರಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದ ನಂತರ ನಂತರ ಮಂಗಳವಾರ ಅಫಿಡವಿಟ್ ಸಲ್ಲಿಸಿ ಕ್ಷಮೆಯಾಚಿಸಲಾಗಿದೆ.
ಕಾನೂನಿನ ಮೇಲೆ ಅತ್ಯುನ್ನತ ಗೌರವವಿದೆ ಎಂದು ಹೇಳಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ ಆಚಾರ್ಯ ಬಾಲಕೃಷ್ಣ, ತಮ್ಮ ಸಂಸ್ಥೆ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದೇ ಇರುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಪ್ರಾಚೀನ ಆಯುರ್ವೇದದ ಕುರಿತಾದ ಸಂಶೋಧನೆಯ ಬೆಂಬಲದೊಂದಿಗೆ ಸಿದ್ಧಪಡಿಸಲಾದ ಪತಂಜಲಿ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೆ ಸಲಹೆ ನೀಡುವ ಉದ್ದೇಶವನ್ನಷ್ಟೇ ಕಂಪೆನಿ ಹೊಂದಿದೆ ಎಂದು ಅವರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಬಾಬಾ ರಾಮದೇವ್ ಅವರ ಸಂಸ್ಥೆ ಕೋವಿಡ್ ಲಸಿಕೆ ಅಭಿಯಾನ ಮತ್ತು ಆಧುನಿಕ ವೈದ್ಯಕೀಯ ಪದ್ಧತಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.