ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 65 ಮೀಸಲಾತಿ ನೀಡುವ ಆದೇಶ ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್
ಪಾಟ್ನಾ: ಬಿಹಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ತೀರಾ ಹಿಂದುಳಿದ ವರ್ಗಗಗಳು ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 65ರಷ್ಟು ಮೀಸಲಾತಿ ನೀಡುವ ಆದೇಶವನ್ನು ಪಾಟ್ನಾ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಈ ಸಂಬಂಧದ ಬಿಹಾರ ಖಾಲಿ ಹುದ್ದೆಗಳ ಮತ್ತು ಸೇವೆಗಳ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ಮತ್ತು ಬಿಹಾರ ಪ್ರವೇಶಾತಿ (ಶೈಕ್ಷಣಿಕ ಸಂಸ್ಥೆಗಳ) ಮೀಸಲಾತಿ (ತಿದ್ದುಪಡಿ) ಕಾಯ್ದೆ-2023ಗಳನ್ನು ಅಲ್ಟ್ರಾ ವೈರಸ್ ಎಂದು ಕೋರ್ಟ್ ಬಣ್ಣಿಸಿದ್ದು, ಇದು ಭಾರತ ಸಂವಿಧಾನದ 14,15 ಮತ್ತು 16ನೇ ವಿಧಿಯಲ್ಲಿ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿದೆ.
ಜಾಟ್, ಮರಾಠಾ ಹಾಗೂ ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಗಳಿಗೆ ಶೇಕಡ 50ಕ್ಕಿಂತ ಅಧಿಕ ಮೀಸಲಾತಿ ನೀಡುವ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಹಲವು ರಾಜ್ಯಗಳು ಈ ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದು, ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಕೂಡಾ ಇತ್ತೀಚೆಗೆ ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ-2020ನ್ನು ಕಳೆದ ವರ್ಷ ಅನೂರ್ಜಿತಗೊಳಿಸಿತ್ತು. ಈ ಕಾಯ್ದೆ ರಾಜ್ಯದ ನಿವಾಸಿಗಳಿಗೆ ಹರ್ಯಾಣದ ಉದ್ಯಮಗಳಲ್ಲಿ ಶೇಕಡ 75ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಜಾರಿಯಾಗಿತ್ತು.
1992ರಲ್ಲಿ ಸುಪ್ರೀಂಕೋರ್ಟ್, ಇಂದ್ರಾ ಸವ್ಹಾನಿ ಪ್ರಕರಣದಲ್ಲಿ ಶೇಕಡ 50ರ ಮೀಸಲಾತಿ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ತೀರ್ಪು ನೀಡಿತ್ತು.