ಪಾಟ್ನಾ ಸಭೆ: ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು 17 ಪಕ್ಷಗಳ ಸಂಕಲ್ಪ
ಪಾಟ್ನಾ: ಬಿಜೆಪಿಯನ್ನು ಪದಚ್ಯುತಗೊಳಿಸಲು 2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು 17 ಪ್ರತಿಪಕ್ಷಗಳು ಶುಕ್ರವಾರ ದೃಢಸಂಕಲ್ಪ ಮಾಡಿವೆ.ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಹೊಂದಿಕೊಂಡು ಕೆಲಸ ಮಾಡಲು ಅವು ನಿರ್ಧರಿಸಿವೆ.
ಪಾಟ್ನಾದಲ್ಲಿ ಶುಕ್ರವಾರ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಸಭೆಯಲ್ಲಿ 17 ರಾಜಕೀಯಪಕ್ಷಗಳ ನಾಯಕರು ವಿಪಕ್ಷ ಏಕತೆಗೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆಂದು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡುವ ತಮ್ಮ ಯೋಜನೆಗೆ ಅಂತಿಮ ಸ್ವರೂಪವನ್ನು ನೀಡಲು ಪ್ರತಿಪಕ್ಷ ನಾಯಕರು ಮುಂದಿನ ಕೆಲವು ದಿನಗಳಲ್ಲಿ ಮತ್ತೆ ಸಭೆ ಸೇರಲಿದ್ದಾರೆಂದು ಅವರು ತಿಳಿಸಿದರು.
‘‘ಪ್ರತಿಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದರೆ, ದೇಶದ ಇತಿಹಾಸವನ್ನು ಬದಲಿಸಲು ಯತ್ನಿಸುತ್ತಿರುವ ಬಿಜೆಪಿಯು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಸಮಾವೇಶದ ಆತಿಥ್ಯ ವಹಿಸಿದ್ದ ನಿತೀಶ್ಕುಮಾರ್ ತಿಳಿಸಿದರು.
ಪ್ರತಿಪಕ್ಷ ನಾಯಕರ ಮುಂದಿನ ಸಭೆಯು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ನಡೆಯಲಿದೆಯೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಿದರು.
‘‘ಪ್ರತಿಪಕ್ಷಗಳ ಏಕತೆಗೆ ಸಂಬಂಧಿಸಿ ನಾವು ಸಮಾನ ಕಾರ್ಯಸೂಚಿಯೊಂದನ್ನು ಸಿದ್ಧಪಡಿಸಲಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಮುನ್ನಡೆಯುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ’’ ಎಂದವರು ತಿಳಿಸಿದರು.
‘‘ಲೋಕಸಭಾ ಚುನಾವಣೆಯನ್ನು ಎದುರಿಸಲು ಪ್ರತಿಯೊಂದು ರಾಜ್ಯದಲ್ಲೂ ನಾವು ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕಾಗಿದೆ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನು ಪದಚ್ಯುತಗೊಳಿಸಲು ನಾವು ಜೊತೆಯಾಗಿ ಶ್ರಮಿಸಲಿದ್ದೇವೆ’’ ಎಂದವರು ತಿಳಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ಗಾಂಧಿ ಮಾತನಾಡಿ ‘‘ ನಮ್ಮಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಪರಸ್ಪರ ಹೊಂದಿಕೊಂಡು ಕೆಲಸ ಮಾಡಲು ಮತ್ತು ನಮ್ಮ ಸಿದ್ಧಾಂತಗಳ ರಕ್ಷಣೆಗಾಗಿ ಶ್ರಮಿಸಲು ನಿರ್ಧರಿಸಿದ್ದೇವೆ’’ ಎಂದು ರಾಹುಲ್ ತಿಳಿಸಿದರು.
ಪ್ರತಿಪಕ್ಷಗಳ ಮೊದಲ ಸಮಾವೇಶ ಪಾಟ್ನಾದಲ್ಲಿ ನಡೆದಿರುವ ಬಗ್ಗೆ ಪ್ರಸ್ತಾವಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘‘ ಪಾಟ್ನಾದಲ್ಲಿ ಯಾವುದು ಆರಂಭಗೊಳ್ಳುವುದೋ, ಅದು ಜನತೆಯ ಚಳವಳಿಯಾಗಿ ರೂಪುಗೊಳ್ಳುತ್ತದೆ’’ ಎಂದರು.
ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಹಾಗೂ ಬಿಜೆಪಿ ವಿರುದ್ಧ ಸಂಯುಕ್ತವಾಗಿ ಹೋರಾಡಲಿದ್ದೇವೆ’’ ಎಂದು ಮಮತಾ ತಿಳಿಸಿದರು.‘‘ ಇತಿಹಾಸವನ್ನು ಬದಲಿಸಲು ಬಿಜೆಪಿ ಬಯಸಿದೆ. ಆದರೆ ನಾವು ಇತಿಹಾಸವು ರಕ್ಷಣೆಯಾಗುವುದನ್ನು ಖಾತರಿಪಡಿಸುತ್ತಿದ್ದೇವೆ ಎಂದರು.
ಡಿಎಂಕೆ ನಾಯಕ, ತಮಿಳ್ನಾಡು ಸಿಎಂ ಸ್ಟಾಲಿನ್, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಎನ್ಸಿಪಿಯ ಶರದ್ಪವಾರ್,ಆಪ್ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜೆಎಂಎಂನ ಹೇಮಂತ್ ಸೊರೇನ್,ಎಸ್ಪಿಯ ಅಖಿಲೇಶ್ ಯಾದವ್, ಆರ್ಜೆಡಿ ನಾಯಕ ಲಾಲು ಪ್ರಸಾದ್ ಮತ್ತಿತರ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.