ಆಂಧ್ರಪ್ರದೇಶದಲ್ಲಿ ಮುಸ್ಲಿಮರ ಶೇ. 4ರಷ್ಟು ಮೀಸಲಾತಿ ಉಳಿಯಲಿದೆ: ಜಗನ್ ಮೋಹನ್ ರೆಡ್ಡಿ
ಕರ್ನೂಲ್: ಮೀಸಲಾತಿ ಹಾಗೂ ಅಲ್ಪಸಂಖ್ಯಾತರ ಮೀಸಲಾತಿ ಕುರಿತು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧ ನಡೆಯುತ್ತಿರುವ ಹೊತ್ತಿನಲ್ಲೇ, ಆಂಧ್ರಪ್ರದೇಶದಲ್ಲಿನ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯು ಉಳಿಯಲಿದ್ದು, ಈ ವಿಚಾರದಲ್ಲಿ ಇದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಂತಿಮ ಮಾತು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಕರ್ನೂಲ್ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, “ಚಂದ್ರಬಾಬು ನಾಯ್ಡು ಒಂದು ಕಡೆ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯನ್ನು ತೆಗೆದು ಹಾಕುವ ನಿಲುವು ಹೊಂದಿರುವ ಬಿಜೆಪಿಯೊಂದಿಗೆ ಕೈಜೋಡಿಸುವುದನ್ನು ಮುಂದುವರಿಸಿದ್ದು, ಮತ್ತೊಂದೆಡೆ, ಅಲ್ಪಸಂಖ್ಯಾತರ ಮತಗಳನ್ನು ಗಳಿಸಲು ಹೊಸ ನಾಟಕದೊಂದಿಗೆ ಬರುತ್ತಿದ್ದಾರೆ. ನೀವು ಊಸರವಳ್ಳಿಯಂಥ ಚಂದ್ರಬಾಬು ನಾಯ್ಡುವನ್ನು ಕಂಡಿರಾ? ಏನೇ ಬರಲಿ, ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯು ಉಳಿಯಲಿದೆ ಹಾಗೂ ಈ ವಿಚಾರದಲ್ಲಿ ಇದು ವೈಎಸ್ಆರ್ ಪಕ್ಷದ ಅಂತಿಮ ಮಾತು. ಚಂದ್ರಬಾಬು ನಾಯ್ಡುಗೆ ನನ್ನ ಒಂದೇ ಪ್ರಶ್ನೆಯೆಂದರೆ, NDA ಸರಕಾರವು ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಪ್ರತಿಜ್ಞೆಗೈದಿರುವಾಗ, ಅವರು NDA ಜೊತೆ ಮೈತ್ರಿ ಮುಂದುವರಿಸಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಮುಂದಿನ ನಾಲ್ಕು ದಿನಗಳಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲಿದೆ. ಈ ಚುನಾವಣೆಯು ಶಾಸಕರು ಹಾಗೂ ಸಂಸದರನ್ನು ಚುನಾಯಿಸಲಲ್ಲ. ಈ ಚುನಾವಣೆಯು ಜಾರಿಯಲ್ಲಿರುವ ಯೋಜನೆಗಳು ಹಾಗೂ ಎಲ್ಲ ಕುಟುಂಬಗಳ ಅಭಿವೃದ್ಧಿಯನ್ನು ನಿರ್ಧರಿಸಲಿದೆ. ನೀವೇನಾದರೂ ಚಂದ್ರಬಾಬು ನಾಯ್ಡುಗೆ ಮತ ಚಲಾಯಿಸಿದರೆ, ಈ ಸರಕಾರವು ನಿಮ್ಮ ಕುಟುಂಬಗಳ ಮನೆ ಬಾಗಿಲಿಗೆ ತಂದಿರುವ ಎಲ್ಲ ಕಲ್ಯಾಣ ಕಾರ್ಯಕ್ರಮಗಳನ್ನು ನೀವೇ ಸ್ಥಗಿತಗೊಳಿಸಿದಂತೆ” ಎಂದು ಎಚ್ಚರಿಸಿದ್ದಾರೆ.
ಮೇ 13ರಂದು ಆಂಧ್ರಪ್ರದೇಶ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳೆರಡೂ ಏಕಕಾಲಕ್ಕೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು 151 ಸ್ಥಾನಗಳ ಭಾರಿ ಬಹುಮತ ಗಳಿಸಿತ್ತು. ವಿರೋಧ ಪಕ್ಷವಾದ ಟಿಡಿಪಿ ಕೇವಲ 23 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು 23 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಟಿಡಿಪಿ 3 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.