ಅಜ್ಮೀರ್ ದರ್ಗಾವನ್ನು ಶಿವ ದೇವಾಲಯ ಎಂದು ಘೋಷಿಸುವಂತೆ ಕೋರಿ ಅರ್ಜಿ | ದರ್ಗಾ ಸಮಿತಿಗೆ ಜೈಪುರ ನ್ಯಾಯಾಲಯ ಸಮನ್ಸ್

Update: 2024-11-27 16:27 GMT

ಅಜ್ಮೀರ್ ದರ್ಗಾ | PC : Youtube 

ಜೈಪುರ : ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸಮಾಧಿ ಸ್ಥಳ ಅಥವಾ ಅಜ್ಮೀರ್ ಶರೀಫ್ ದರ್ಗಾವನ್ನು ಶಿವದೇವಾಲಯ ಎಂದು ಘೋಷಿಸುವಂತೆ ಕೋರಿದ ಅರ್ಜಿಯ ವಿಚಾರಣೆ ನಡೆಸಲು ರಾಜಸ್ಥಾನ ನ್ಯಾಯಾಲಯ ಬುಧವಾರ ಒಪ್ಪಿಕೊಂಡಿದೆ.

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಶಾಹಿ ಜಮಾ ಮಸೀದಿಯ ಸಮೀಕ್ಷೆ ನಡೆಸಲು ನ್ಯಾಯಾಲಯ ಆದೇಶ ನೀಡಿದ ಬಳಿಕ ನಡೆದ ಪ್ರತಿಭಟನೆ ಹಾಗೂ ಪೊಲೀಸ್ ಗೋಲಿಬಾರ್‌ನಲ್ಲಿ ಅಪ್ರಾಪ್ತ ಸೇರಿದಂತೆ ಐವರು ಸಾವನ್ನಪ್ಪಿದ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಹಿಂದೂ ಸೇನಾದ ರಾಷ್ಟ್ರಾಧ್ಯಕ್ಷ ವಿಷ್ಣು ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಅಜ್ಮೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮನಮೋಹನ್ ಚಂಡೇಲ್ ವಿಚಾರಣೆ ನಡೆಸಲು ಒಪ್ಪಿಕೊಂಡರು ಹಾಗೂ ದರ್ಗಾ ಸಮಿತಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ, ಭಾರತದ ಪುರಾತತ್ವ ಸರ್ವೇಕ್ಷಣಾಲಯಕ್ಕೆ ಸಮನ್ಸ್ ನೋಟಿಸ್ ಜಾರಿಗೊಳಿಸುವಂತೆ ನಿರ್ದೇಶಿಸಿದರು.

ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಗೊಳಿಸಿತು.

ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಘೋಷಿಸುವಂತೆ ಕೋರಿ ಹಿಂದೂ ಸೇನಾ ಸಲ್ಲಿಸಿದ ಅರ್ಜಿಯನ್ನು ಪುರಷ್ಕರಿಸಲು ಅಜ್ಮೀರ್ ನ್ಯಾಯಾಲಯ ಈ ವರ್ಷ ಸೆಪ್ಟಂಬರ್‌ನಲ್ಲಿ ನಿರಾಕರಿಸಿದ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ತನ್ನ ನಿರ್ಧಾರಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ತನಗೆ ಅಧಿಕಾರ ವ್ಯಾಪ್ತಿ ಇಲ್ಲದಿರುವುದು ಕಾರಣ ಎಂದು ಅದು ಉಲ್ಲೇಖಿಸಿತ್ತು. ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮಂದೂಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News