ವೈವಾಹಿಕ ಅತ್ಯಾಚಾರ ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲು ಮನವಿ: ತ್ರಿಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು

Update: 2023-07-19 16:19 GMT

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ: ವೈವಾಹಿಕ ಸಂಬಂಧದಲ್ಲಿನ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಬೇಕೆಂದು ಕೋರಿ ಸಲ್ಲಿಸಲಾದ ಸರಣಿ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ಸಮ್ಮತಿಸಿದ್ದಾರೆ.

ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿಯವರ ಪೀಠದ ಮುಂದೆ ತುರ್ತು ಆಲಿಕೆಗೆ ಪಟ್ಟಿ ಮಾಡಲು ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್ ಹಾಗೂ ಕರುಣಾ ನಂದಿ ಅವರು ಜಂಟಿಯಾಗಿ ಮನವಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ನ್ಯಾಯಪೀಠದ ಅಗತ್ಯವಿದೆಯೆಂದು ಹೇಳಿದ ನ್ಯಾಯಾಲಯವು, ಅದನ್ನು ತ್ವರಿತವಾಗಿ ಆಲಿಕೆಗೆ ಪಟ್ಟಿ ಮಾಡಲು ಸಮ್ಮತಿಸಿತು.

ಈ ಮೊದಲು ನಡೆದ ಆಲಿಕೆಯ ಸಂದರ್ಭ, ಕೇಂದ್ರ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಶರ್ಮಾ ಅವರು ಈ ಪ್ರಕರಣವು ಕಾನೂನಾತ್ಮಕವಾಗಿ ಪರಿಣಾಮವನ್ನು ಬೀರಲಿದೆ ಮಾತ್ರವಲ್ಲ, ಸಾಮಾಜಿಕವಾಗಿಯೂ ವ್ಯಾಪಕ ಪ್ರಭಾವವನ್ನು ಬೀರಲಿದೆ ಎಂದರು.

ವೈವಾಹಿಕ ಸಂಬಂಧದಲ್ಲಿನ ಅತ್ಯಾಚಾರಕ್ಕೆ ಸಂಬಂಧಿಸಿ ಕರ್ನಾಟಕ ಹಾಗೂ ದಿಲ್ಲಿ ಹೈಕೋರ್ಟ್ ನೀಡಿದ ತೀರ್ಪುಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಈ ಅರ್ಜಿಗಳು ಸಲ್ಲಿಕೆಯಾಗಿವೆ.

ಪತಿಯು ತನ್ನ ಪತ್ನಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಆತನ ವಿರುದ್ಧ ಅತ್ಯಾಚಾರದ ಆರೋಪವನ್ನು ಹೊರಿಸಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿತ್ತು. ತರುವಾಯ ಕರ್ನಾಟಕ ಸರಕಾರವು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ರಾಜ್ಯ ಹೈಕೋರ್ಟ್ ನ ತೀರ್ಪನ್ನು ಬೆಂಬಲಿಸಿತ್ತು.

ಭಾರತೀಯ ದಂಡಸಂಹಿತೆಯ ಸೆಕ್ಷನ್ 375 ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವುದಿಲ್ಲ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ತನ್ನ ಪತ್ನಿಯ ಮೇಲೆ ಪುರುಷನು ಆಕೆಯ ಸಮ್ಮತಿಯಿಲ್ಲದೆ ಲೈಂಗಿಕ ಸಂಭೋಗವನ್ನು ನಡೆಸಿದರೂ, ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ.

ಆದರೆ ಕರ್ನಾಟಕ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ತೀರ್ಪೊಂದರಲ್ಲಿ ಭಾರತೀಯ ದಂಡಸಂಹಿತೆಯಲ್ಲಿ ವಿನಾಯಿತಿಯಿರುವ ಹೊರತಾಗಿಯೂ ವೈವಾಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗೊಳಪಡಿಸಬೇಕು ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News