ಪೆಟ್ರೋಲ್ 11.80 ರೂ.ಗಳಷ್ಟು ಅಗ್ಗವಾಗಲಿದೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಹೊಸದಿಲ್ಲಿ: ರಾಜಸ್ಥಾನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಆಯ್ಕೆಯಾದರೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕನಿಷ್ಠ 11.80 ರೂ.ಗಳಷ್ಟು ಅಗ್ಗವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದ್ದಾರೆ.
ಜೈಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏನು ಬದಲಾಗುತ್ತದೆ ಎಂದು ತನ್ನನ್ನು ಕೇಳಲಾಗುತ್ತಿದೆ ಎಂದರು. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪೆಟ್ರೋಲಿಯಂ ಬೆಲೆ ಇಳಿಸುವ ದಿಶೆಯಲ್ಲಿ ಕಾರ್ಯ ನಿರ್ವಹಿಸಲಿದೆ. ರಾಜ್ಯದಲ್ಲಿ ಬಿಜೆಪಿ ಚುನಾಯಿತವಾದರೆ ಪೆಟ್ರೋಲ್ ಬೆಲೆ ಲೀಟರ್ಗೆ ಕನಿಷ್ಠ 11.80 ರೂ. ಅಗ್ಗವಾಗಲಿದೆ ಎಂದು ಪುರಿ ಹೇಳಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಹೆಚ್ಚುವರಿ ಸೆಸ್ ಅನ್ನು ಹೇರಿರುವುದರಿಂದ ದೇಶದಲ್ಲೇ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕ ಇದೆ ಎಂದು ಪುರಿ ಆರೋಪಿಸಿದರು. ಕಳೆದ ಎರಡು ವರ್ಷಗಳಲ್ಲಿ ಅಶೋಕ್ ಗೆಹ್ಲೋಟ್ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚುವರಿ 35,975 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ ಎಂದರು.
ಇತರ 18ಕ್ಕೂ ಅಧಿಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಸಂಗ್ರಹಿಸಿದ ತೆರಿಗೆಗಿಂತ ಅಧಿಕ 2,000 ಕೋ. ರೂ. ತೆರಿಗೆಯನ್ನು ರಾಜಸ್ಥಾನವೊಂದೇ ಸಂಗ್ರಹಿಸಿದೆ ಎಂದು ಪುರಿ ಹೇಳಿದರು. ದೇಶಾದ್ಯಂತ ಪೆಟ್ರೋಲ್ ಬೆಲೆ ಸರಾಸರಿ ಲೀಟರ್ಗೆ 96.72 ರೂ. ಇದೆ. ಆದರೆ, ರಾಜಸ್ಥಾನದ ಗಾಂಧಿ ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 113.34 ರೂ. ಇದೆ ಎಂದು ಅವರು ಹೇಳಿದರು.
ರಾಜಸ್ಥಾನ ವಿಧಾನ ಸಭೆ ಚುನಾವಣೆ ನವೆಂಬರ್ 25ರಂದು ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಘೋಷಣೆಯಾಗಲಿದೆ.