ಹೈಕೋರ್ಟ್ ಸಿಜೆಯ ಪ್ರಮಾಣ ವಚನ ಪ್ರಶ್ನಿಸಿ ಪಿಐಎಲ್ : ಅರ್ಜಿದಾರನಿಗೆ 5 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಬಾಂಬೆ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರು ಮಾಡಿದ ಪ್ರಮಾಣ ವಚನ ದೋಷ ಪೂರಿತವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಪ್ರತಿಪಾದಿಸಿದ ವ್ಯಕ್ತಿಯೋರ್ವನಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ ಹಾಗೂ ಇದು ಪ್ರಚಾರ ಗಳಿಸುವ ಕ್ಷುಲ್ಲಕ ಪ್ರಯತ್ನವಾಗಿತ್ತು ಎಂದು ಹೇಳಿದೆ.
ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದ ಹಾಗೂ ಸಂಬಂಧಿತ ವ್ಯಕ್ತಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಆಕ್ಷೇಪ ಎತ್ತುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
‘‘ಇಂತಹ ನಿಷ್ಪ್ರಯೋಜಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತವೆ. ಅಲ್ಲದೆ ಹೆಚ್ಚು ಗಂಭೀರ ವಿಷಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತವೆ. ನ್ಯಾಯಾಲಯದ ರಿಜಿಸ್ಟ್ರಿ ಹಾಗೂ ನ್ಯಾಯಾಂಗದ ಮಾನವ ಶಕ್ತಿಯ ಮೂಲಭೂತ ಸೌಕರ್ಯವನ್ನು ಕಬಳಿಸುತ್ತವೆ ಎಂದು ನಾವು ಸ್ಪಷ್ಟವಾಗಿ ಪರಿಗಣಿಸುತ್ತೇವೆ’’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.