ಪಾಕಿಸ್ತಾನ ವಿರುದ್ಧ ಆಡುವುದು ಯಾವಾಗಲೂ ಕಷ್ಟಕರ: ಹರ್ಭಜನ್ ಸಿಂಗ್
ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿರುವ ಭಾರತದ ಪಾಲಿಗೆ ಇದು ಸವಾಲಿನ ಸಮಯವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉಭಯ ತಂಡಗಳು ಅಪರೂಪಕ್ಕೊಮ್ಮೆ ಆಡುತ್ತಿವೆ ಎಂದು 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಎ ಗುಂಪಿನ ಪಂದ್ಯಕ್ಕೆ ಇನ್ನು ಕೆಲವೇ ದಿನಗಳಿವೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವು ಜೂನ್ 9ರಂದು ನ್ಯೂಯಾರ್ಕ್ನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನು ಆಡಿರುವ ಭಾರತವು ಆರು ಬಾರಿ ಜಯ ಸಾಧಿಸಿದೆ. 2022ರ ಅಕ್ಟೋಬರ್ನಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಆಕರ್ಷಕ 82 ರನ್ ನೆರವಿನಿಂದ ಭಾರತವು ಪಾಕಿಸ್ತಾನ ವಿರುದ್ಧ 4 ವಿಕೆಟ್ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಹೆಚ್ಚು ಪಂದ್ಯಗಳನ್ನು ಆಡದ ಕಾರಣ ಪಾಕಿಸ್ತಾನ ವಿರುದ್ಧ ಆಡುವುದು ಭಾರತಕ್ಕೆ ಯಾವಾಗಲೂ ಕಠಿಣವಾಗಿರುತ್ತದೆ. ಈ ಅಂಶವನ್ನು ಭಾರತೀಯ ಕ್ರಿಕೆಟ್ ತಂಡ ಪರಿಗಣಿಸಬೇಕು. ಉಭಯ ತಂಡಗಳು ಮೈದಾನದಲ್ಲಿ ಕಾದಾಡುವಾಗ ಈ ವಿಚಾರ ಮುಖ್ಯವಾಗುತ್ತದೆ ಎಂದು ಹರ್ಭಜನ್ ಹೇಳಿದ್ದಾರೆ.
ಆ ನಿರ್ದಿಷ್ಟ ದಿನದಂದು ಏನು ನಿರ್ಧಾರ ತೆಗೆದುಕೊಳ್ಳುತ್ತೀರೊ ಅದು ಮುಖ್ಯವಾಗುತ್ತದೆ. ನಿಮ್ಮ ಎದುರಾಳಿ ತಂಡದ ಕುರಿತು ಎಷ್ಟು ಗೊತ್ತಿದೆ ಎನ್ನುವುದು ಮುಖ್ಯವಲ್ಲ. ಆದರೆ ನಿಮ್ಮ ಪಂದ್ಯದ ಕುರಿತ ಅರಿವು ಮುಖ್ಯವಾಗಿದೆ. ಭಾರತ ತಂಡ ತನ್ನ ಪಂದ್ಯದ ಕುರಿತು ಚೆನ್ನಾಗಿ ಅರಿತುಕೊಂಡಿದ್ದು ಮೈದಾನದ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಎಂದು ಹರ್ಭಜನ್ ಹೇಳಿದ್ದಾರೆ.
2024ರ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ಇಂಡೀಸ್ನ 6 ತಾಣಗಳು ಹಾಗೂ ಅಮೆರಿಕದ 3 ತಾಣಗಳಲ್ಲಿ ನಡೆಯಲಿದೆ. 20 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್-8ರ ಹಂತದಲ್ಲಿ ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಸೂಪರ್-8ರ ಅಗ್ರ ಎರಡು ತಂಡಗಳು ಸೆಮಿ ಫೈನಲ್ಗೆ ತೇರ್ಗಡೆಯಾಗುತ್ತವೆ. ಸೆಮಿ ಫೈನಲ್ ಪಂದ್ಯಗಳು ಕ್ರಮವಾಗಿ ಜೂನ್ 26 ಹಾಗೂ 27ರಂದು ಗಯಾನ ಹಾಗೂ ಟ್ರಿನಿಡಾಡ್-ಟೊಬಾಗೊದಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ಜೂನ್ 29ರಂದು ಬಾರ್ಬಡೋಸ್ನಲ್ಲಿ ನಿಗದಿಯಾಗಿದೆ.