ಪ್ರಧಾನಿ ಮೋದಿಯವರ ಚುನಾವಣಾ ಭಾಷಣಗಳು ಕೇವಲ ಪೊಳ್ಳು ಮಾತುಗಳು: ಪ್ರಿಯಾಂಕಾ ಗಾಂಧಿ
ನಂದೂರಬಾರ್ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಭಾಷಣಗಳು ಕೇವಲ ಪೊಳ್ಳುಮಾತುಗಳಾಗಿವೆ ಎಂದು ಶನಿವಾರ ಇಲ್ಲಿ ಬಣ್ಣಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅವರು ಅಧಿಕಾರ ಗಳಿಸುವ ಉದ್ದೇಶದಿಂದ ಮಾತ್ರ ರಾಜಕೀಯವನ್ನು ಮಾಡುತ್ತಿದ್ದಾರೆ, ಜನರ ಸೇವೆಗಾಗಿ ಅಲ್ಲ ಎಂದು ಆರೋಪಿಸಿದರು.
ನಂದೂರಬಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪಾಡವಿ ಪರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, ‘ಮೋದಿಯವರ ಭಾಷಣಗಳಲ್ಲಿ ಯಾವುದೇ ತೂಕವಿಲ್ಲ, ಅವೆಲ್ಲ ಪೊಳ್ಳು ಮಾತುಗಳು.ಆದಿವಾಸಿಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಮೋದಿ ಅವರ ಮನೆಗೆ ಭೇಟಿ ನೀಡಿದ ಒಂದು ಚಿತ್ರ ನನಗೆ ತೋರಿಸಿ’ ಎಂದರು.
ಬುಡಕಟ್ಟು ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಶುಕ್ರವಾರ ಮೋದಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು.
ನಿಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವುದು ರಾಜಕೀಯ ನಾಯಕರ ಕರ್ತವ್ಯವಾಗಿದೆ ಎಂದ ಪ್ರಿಯಾಂಕಾ, ಬಿಜೆಪಿ ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವುದಿಲ್ಲ. ಆದಿವಾಸಿ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲು ಅಥವ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿರಲಿಲ್ಲ. ನಿಜವಾಗಿ ಗೌರವಿಸುವ ವಿಷಯ ಬಂದಾಗ ಮೋದಿ ಹಿಂದೆ ಸರಿಯುತ್ತಾರೆ ಎಂದು ಆರೋಪಿಸಿದರು.
ಮೋದಿ ವಿರುದ್ಧ ಇನ್ನಷ್ಟು ದಾಳಿ ನಡೆಸಿದ ಪ್ರಿಯಾಂಕಾ,ತನ್ನನ್ನು ನಿಂದಿಸಲಾಗುತ್ತಿದೆ ಎಂದು ಹೇಳಿಕೊಂಡು ಮೋದಿ ಮಗುವಿನಂತೆ ಅಳುತ್ತಾರೆ. ಇದು ಸಾರ್ವಜನಿಕ ಜೀವನ. ಇಂದಿರಾ ಗಾಂಧಿಯವರಿಂದ ಕಲಿತುಕೊಳ್ಳಿ. ದುರ್ಗೆಯಂತಹ ಮಹಿಳೆ ಪಾಕಿಸ್ತಾನವನ್ನು ಎರಡು ತುಂಡುಗಳನ್ನಾಗಿ ಮಾಡಿದ್ದರು. ಅವರ ಶೌರ್ಯ, ಧೈರ್ಯ ಮತ್ತು ದೃಢಸಂಕಲ್ಪದಿಂದ ಕಲಿತುಕೊಳ್ಳಿ. ಆದರೆ ಅವರನ್ನು ದೇಶವಿರೋಧಿ ಎಂದು ಕರೆಯುವ ನೀವು ಅವರಿಂದ ಏನನ್ನು ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದರು.