ಸೊರೊಸ್ ನಿಧಿ ಪಡೆದಿರುವ ಆರೋಪ: ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ ಪ್ರಧಾನಿಮಂತ್ರಿಗಳ ಸಲಹಾ ಮಂಡಳಿ ಸದಸ್ಯೆ
ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಬಿರುಗಾಳಿಯ ಕೇಂದ್ರಬಿಂದುವಾಗಿರುವ ಅಮೆರಿಕನ್ ಹೂಡಿಕೆದಾರ ಜಾರ್ಜ್ ಸೊರೊಸ್ ಅವರಿಂದ ಹಣಕಾಸು ಬೆಂಬಲ ಪಡೆದಿದ್ದ ಸಂಸ್ಥೆಯಿಂದ ತಾನು ಹಣವನ್ನು ಸ್ವೀಕರಿಸಿದ್ದೆ ಎಂಬ ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪವನ್ನು ಪ್ರಧಾನ ಮಂತ್ರಿಗಳ ಸಲಹಾಮಂಡಳಿಯ ಸದಸ್ಯೆ ಪ್ರೊ.ಶಮಿಕಾ ರವಿ ತಳ್ಳಿ ಹಾಕಿದ್ದಾರೆ.
ಖೇರಾ ಆರೋಪವನ್ನು ‘ಸಂಪೂರ್ಣ ತಪ್ಪು’ ಎಂದು ಬಣ್ಣಿಸಿದ ಶಮಿಕಾ, ‘2006-07ರಲ್ಲಿ ನಾನು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್‌ಬಿ)ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾಗ ಸೊರೊಸ್‌ರ ಓಪನ್ ಸೊಸೈಟಿ ಫೌಂಡೇಷನ್ ಹಣಕಾಸು ಸೇರ್ಪಡೆ ಕುರಿತು ಕಾರ್ಯಕ್ರಮಕ್ಕಾಗಿ ಐಎಸ್‌ಬಿಗೆ ಆರ್ಥಿಕ ನೆರವು ಒದಗಿಸಿತ್ತು. ನಾನು ಆ ವಿಷಯವನ್ನು ಬೋಧಿಸುತ್ತಿದ್ದೆ ಮತ್ತು ಅದರ ಮೇಲೆ ಸಂಶೋಧನೆ ನಡೆಸುತ್ತಿದ್ದೆ,ಆದರೆ ಬೋಧಕ ವೃಂದದ ಯಾರೂ ನೇರವಾಗಿ ಹಣವನ್ನು ಪಡೆದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
ಐಎಸ್‌ಬಿಯಲ್ಲಿ ಸೇವೆಯ ಬಳಿಕ 18 ವರ್ಷಗಳ ನಂತರವಷ್ಟೇ ತಾನು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಗೆ ಸೇರ್ಪಡೆಗೊಂಡಿದ್ದು,ಇದು ಮಾನನಷ್ಟ ಪ್ರಕರಣಕ್ಕೆ ಸೂಕ್ತವಾದ ಪ್ರಕರಣವಾಗಿದೆ ಎಂದು ಹೇಳಿದರು.
‘2020ರಲ್ಲಿ ಸೊರೊಸ್ ತನ್ನ ಭಾರತ ವಿರೋಧಿ ನೀತಿಯನ್ನು ಘೋಷಿಸಿದ್ದರು ಮತ್ತು ಅವರೊಂದಿಗೆ ಯಾರು ಸೇರುತ್ತಾರೆ ಎಂದು ಊಹಿಸಿ’ ಎಂದು ಶಮಿಕಾ ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ಟ್ವೀಟಿಸಿದ್ದಾರೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೊರೊಸ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಬಿಜೆಪಿಯ ಆರೋಪಗಳ ನಡುವೆಯೇ ಖೇರಾ ಅವರು ಮಂಗಳವಾರ,ಶಮಿಕಾ ಓಪನ್ ಸೊಸೈಟಿ ಫೌಂಡೇಷನ್‌ನಿಂದ ಅನುದಾನವನ್ನು ಪಡೆದಿದ್ದರು ಎಂದು ಟ್ವೀಟಿಸಿದ್ದರು. ಇದು ಸಂಭಾವ್ಯ ರಾಜಕೀಯ ಹಿತಾಸಕ್ತಿ ಸಂಘರ್ಷವನ್ನು ಸೂಚಿಸುತ್ತಿದೆ ಎಂದು ಹೇಳಿದ್ದ ಅವರು,ಶಮಿಕಾ ಚಟುವಟಿಕೆಗಳ ಬಗ್ಗೆ ತನಿಖೆಗೆ ಕರೆ ನೀಡಿದ್ದರು.
‘ಪ್ರಧಾನಿ ಕಚೇರಿಯು ಶಮಿಕಾರನ್ನು ಹುದ್ದೆಯಿಂದ ತೆಗೆಯುತ್ತದೆಯೇ ಮತ್ತು ಭಾರತವನ್ನು ಅಸ್ಥಿರಗೊಳಿಸಲು ಅವರೇನು ಮಾಡಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂಬ ಬಗ್ಗೆ ತನಿಖೆಯನ್ನು ಆರಂಭಿಸುತ್ತದೆಯೇ?’ ಎಂದೂ ಖೇರಾ ಪ್ರಶ್ನಿಸಿದ್ದರು.