ಎರಡು ಪ್ರಕರಣಗಳಲ್ಲಿ ಪೊಲೀಸರು ನ್ಯಾಯಾಲಯವನ್ನು ಮೂರ್ಖನನ್ನಾಗಿಸಿದ್ದಾರೆ, ಇಬ್ಬಗೆ ನಿಲುವು ಅನುಸರಿಸಿದ್ದಾರೆ: ನ್ಯಾಯಾಧೀಶರಿಂದ ತರಾಟೆ

Update: 2023-08-28 09:29 GMT

ಹೊಸದಿಲ್ಲಿ: 2020ರ ದಿಲ್ಲಿ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವನ್ನು ಮೂರ್ಖನನ್ನಾಗಿಸಿದ್ದಕ್ಕಾಗಿ ಮತ್ತು ಇಬ್ಬಗೆ ನಿಲುವುಗಳನ್ನು ಅನುಸರಿಸುತ್ತಿರುವುದಕ್ಕಾಗಿ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದಾರೆ.

ನ್ಯಾ.ಪ್ರಮಾಚಲ ಅವರು ಎರಡು ಆದೇಶಗಳನ್ನು ಹೊರಡಿಸಿದ್ದಾರೆ. ಕಳೆದ ವಾರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದ ನ್ಯಾ.ಪ್ರಮಾಚಲ ಅವರು,ಪೊಲೀಸರು ಆತನ ವಿರುದ್ಧ ‘ಕೃತಕ ಹೇಳಿಕೆಗಳನ್ನು ’ ಸಲ್ಲಿಸಿದ್ದರು ಎಂದು ಬೆಟ್ಟು ಮಾಡಿದ್ದರು.

2020,ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದವು. ಕನಿಷ್ಠ 53 ಜನರು ಕೊಲ್ಲಲ್ಪಟ್ಟಿದ್ದು,ನೂರಾರು ಜನರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಸಾಹೀನ್ ಸೈಫಿ ಎಂಬ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದ್ದು,ಪ್ರಕರಣವನ್ನು ಸ್ಥಾಪಿಸಲು ಅಗತ್ಯವಾಗಿರುವ ವೀಡಿಯೊವನ್ನು ವಿಧಿವಿಜ್ಞಾನ ವಿಭಾಗದಿಂದ ಇನ್ನಷ್ಟೇ ಸ್ವೀಕರಿಸಬೇಕಿದೆ ಎಂದು

ವಿಶೇಷ ಸರಕಾರಿ ಅಭಿಯೋಜಕರು ತಿಳಿಸಿದ್ದರು. ಆದರೆ ಅಂತಹ ಯಾವುದೇ ವೀಡಿಯೊ ಅಸ್ತಿತ್ವದಲ್ಲಿಲ್ಲ ಎನ್ನುವುದು ನಂತರ ಬೆಳಕಿಗೆ ಬಂದಿತ್ತು.

ಸರಕಾರಿ ಅಭಿಯೋಜಕರು ನ್ಯಾಯಾಲಯವನ್ನು ಮೂರ್ಖನನ್ನಾಗಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ ನ್ಯಾ.ಪ್ರಮಾಚಲ,ಇದು ವೀಡಿಯೊವನ್ನು ಅವಲಂಬಿಸಿರುವುದರಿಂದ ಈ ಪ್ರಕರಣದ ಸಾಕ್ಷ್ಯವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಈ ಪ್ರಕರಣಕ್ಕಾಗಿ ವೀಡಿಯೊದ ಯಥಾಪ್ರತಿಯನ್ನು ಇನ್ನಷ್ಟೇ ಸಿದ್ಧಗೊಳಿಸಬೇಕಿದೆ ಮತ್ತು ಪಡೆದುಕೊಳ್ಳಬೇಕಿದೆ ಎನ್ನುವುದನ್ನು ಗಮನಿಸಿದರು.

ಪ್ರತ್ಯೇಕ ಪ್ರಕರಣದಲ್ಲಿ ನ್ಯಾಯಾಧೀಶರು ಸ್ಥಳ ಮತ್ತು ಸಮಯದ ಹೋಲಿಕೆಯಿಂದಾಗಿ ಆರು ಘಟನೆಗಳನ್ನು ಒಟ್ಟಿಗೆ ಸೇರಿಸಲಾಗಿದ್ದರೂ ಮೂರು ಪ್ರಕರಣಗಳಿಗಾಗಿ ಮಾತ್ರ ಸೈಟ್ ಪ್ಲಾನ್ ಸಿದ್ಧಗೊಳಿಸಿದ್ದಕ್ಕಾಗಿ ಪೊಲೀಸರನ್ನು ಟೀಕಿಸಿದರು.

ತನಿಖಾಧಿಕಾರಿಯು ಇಬ್ಬಗೆ ನಿಲುವುಗಳನ್ನು ಅನುಸರಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದ ನ್ಯಾಯಾಲಯವು,ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಡಿಸಿಪಿಗೆ ನಿರ್ದೇಶನ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News