ದಿಲ್ಲಿ ಚಲೋ: ತಡೆಗೋಡೆ ತೆರವುಗೊಳಿಸಿ ಮುನ್ನುಗ್ಗಲು ಯತ್ನಿಸಿದ ರೈತರು; ಪೊಲೀಸರಿಂದ ಅಶ್ರುವಾಯು ಪ್ರಯೋಗ
ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ʼದಿಲ್ಲಿ ಚಲೋʼ ನಡೆಸಲು ಉದ್ದೇಶಿಸಿದ್ದ ರೈತರು ಶಂಭು ಗಡಿ ಬಳಿ ಪೊಲೀಸರು ನಿರ್ಮಿಸಿದ್ದ ತಡೆಗೋಡೆಗಳನ್ನು(ಮುಳ್ಳು ತಂತಿ ಬೇಲಿಗಳನ್ನು) ತೆರವುಗೊಳಿಸಿ ಮುನ್ನುಗ್ಗಲು ಮುಂದಾದಾಗ ಪೊಲೀಸರು ರೈತರ ಮೇಲೆ ಅಶ್ರುವಾಯುಗಳನ್ನು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆಯ ವೇಳೆ ಕೆಲ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆ ಕೇಂದ್ರ ಸರಕಾರ ಸಂಧಾನದ ಬಾಗಿಲುಗಳು ಮುಕ್ತವಾಗಿವೆ ಎಂದು ಹೇಳಿಕೊಂಡಿದೆ.
ಎಂಎಸ್ಪಿ ಜಾರಿಗೆ ಒತ್ತಾಯಿಸಿದ ರೈತರು ಇದಕ್ಕೂ ಮುನ್ನ ಫೆಬ್ರವರಿ 13 ಹಾಗೂ ಫೆಬ್ರವರಿ 21ರಂದು ದಿಲ್ಲಿಯತ್ತ ಮೆರವಣಿಗೆ ತೆರಳಲು ಪ್ರಯತ್ನಿಸಿದ್ದರು. ಆದರೆ, ಪಂಜಾಬ್-ಹರ್ಯಾಣ ಗಡಿಗಳ ಶಂಭು ಮತ್ತು ಖನೌರಿ ಬಳಿ ಅವರನ್ನು ಭದ್ರತಾ ಪಡೆಗಳು ತಡೆದಿದ್ದವು. ಅಂದಿನಿಂದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾಗಳ ನೇತೃತ್ವದಲ್ಲಿ ಶಂಭು ಮತ್ತು ಖನೌರಿ ಗಡಿಗಳ ಬಳಿ ರೈತರು ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತ ರೈತರು, ಪೊಲೀಸರು ನಿರ್ಮಿಸಿದ್ದ ಕಾಂಕ್ರೀಟ್ ಬ್ಲಾಕ್ ಗಳು, ಕಬ್ಬಿಣದ ಮೊಳೆಗಳು ಹಾಗೂ ಮುಳ್ಳು ತಂತಿಗಳನ್ನು ಭೇದಿಸುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ, ಅವರು ತಮ್ಮ ಮೆರವಣಿಗೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಮಧ್ಯಾಹ್ನ 1 ಗಂಟೆಗೆ ರೈತರ ನಾಯಕರಾದ ಸುರ್ಜೀತ್ ಸಿಂಗ್ ಫೂಲ್, ಸತ್ನಮ್ ಸಿಂಗ್ ಪನ್ನು, ಸವೀಂದರ್ ಸಿಂಗ್ ಚೌತಾಲ, ಬಲ್ಜಿಂದರ್ ಸಿಂಗ್ ಚಡಿಯಾಲ ಹಾಗೂ ಮಂಜಿತ್ ಸಿಂಗ್ ನೇತೃತ್ವದಲ್ಲಿ 101 ರೈತರ ಗುಂಪು ಸಂಸತ್ತಿನೆಡೆಗೆ ಮೆರವಣಿಗೆ ಹೊರಟಿತ್ತು.