ಅಯೋಧ್ಯೆ ರೈಲ್ವೆ ನಿಲ್ದಾಣದ ಕಳಪೆ ನಿರ್ವಹಣೆ; ಗುತ್ತಿಗೆದಾರನಿಗೆ ದಂಡ : ವೀಡಿಯೊ ವೈರಲ್

Update: 2024-03-23 14:56 GMT

Photo: X \ @drm_lko

ಅಯೋಧ್ಯೆ (ಉತ್ತರ ಪ್ರದೇಶ): ನೂತನವಾಗಿ ಉದ್ಘಾಟನೆಗೊಂಡಿರುವ ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣದ ಕಳಪೆ ನಿರ್ವಹಣೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ರೈಲ್ವೆ ಇಲಾಖೆಯು ನಿಲ್ದಾಣದ ಸ್ವಚ್ಛತಾ ಗುತ್ತಿಗೆದಾರನಿಗೆ ಭಾರಿ ದಂಡ ವಿಧಿಸಿದೆ.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ @reality5473 ಎಂಬ ಬಳಕೆದಾರರು ಕಳೆದ ವರ್ಷ ಮೂರು ಅಂತಸ್ತಿನ ಕಟ್ಟಡ ಹಾಗೂ ನೂತನ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿದ್ದ ರೈಲ್ವೆ ನಿಲ್ದಾಣದ ಶೋಚನೀಯ ಪರಿಸ್ಥಿತಿಯ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊ ತುಣುಕಿನಲ್ಲಿ ನೆಲದ ಮೇಲೆ ಕಸ ಬಿದ್ದಿರುವುದು ಹಾಗೂ ಕಸದ ಬುಟ್ಟಿಗಳು ತುಂಬಿ ತುಳುಕುತ್ತಿರುವುದು ಕಂಡು ಬಂದಿತ್ತು.

ಮೊದಲ ವೀಡಿಯೊದಲ್ಲಿ ಜನರು ನಿಲ್ದಾಣದ ಹೊರಗೆ ನಿದ್ರಿಸುತ್ತಿರುವುದು ಹಾಗೂ ಕಸದ ಬುಟ್ಟಿಯಿಂದ ಕಸವು ಹೊರ ಚೆಲ್ಲಿರುವುದು ಕಂಡು ಬಂದಿತ್ತು. ಈ ವೀಡಿಯೊವನ್ನು ಹಂಚಿಕೊಂಡಿದ್ದ ವ್ಯಕ್ತಿಯು, ಹೇಗೆ ಬೀದಿಗಳನ್ನು ಶುಚಿಗೊಳಿಸಲಾಗಿಲ್ಲ ಎಂಬುದರತ್ತಲೂ ಬೊಟ್ಟು ಮಾಡಿದ್ದರು.

ಎರಡನೆ ವೀಡಿಯೊದಲ್ಲಿ ನಿಲ್ದಾಣದ ಒಳಗೆ ವಿವಿಧ ಸ್ಥಳಗಳಲ್ಲಿ ಕಸ ಬಿದ್ದಿರುವುದು ಕಂಡು ಬಂದಿತ್ತು. ಅವರು ನೆಲದ ಮೇಲಿನ ಎಲೆಯಡಿಕೆ ಕಲೆಯ ಗುರುತನ್ನೂ ತೋರಿಸಿದ್ದರು.

ಮೂರನೆಯ ವೀಡಿಯೊ ತುಣುಕಿನಲ್ಲಿ ನೆಲದ ಮೇಲೆ ಕಸ ಬಿದ್ದಿರುವುದನ್ನು ತೋರಿಸಿದ್ದರು. ಇದರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಎರಡನೆ ಹಂತದ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನೂ ತೋರಿಸಿದ್ದರು.

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಉತ್ತರ ರೈಲ್ವೆಯ ಲಕ್ನೊ ವಲಯವು, ರೈಲ್ವೆ ನಿಲ್ದಾಣದ ಸ್ವಚ್ಚತಾ ಗುತ್ತಿಗೆದಾರನಿಗೆ 50,000 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News