ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ವಯಸ್ಕ ಆರೋಪಿಗೆ ಜಾಮೀನು ನೀಡಿದ್ದ ಬಾಲ ನ್ಯಾಯಮಂಡಳಿಯ ಇಬ್ಬರು ಸದಸ್ಯರ ವಜಾ

Update: 2024-10-10 12:52 GMT

PC : PTI 

ಪುಣೆ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿಯ ಅಪ್ರಾಪ್ತ ವಯಸ್ಕ ಆರೋಪಿಗೆ ನೀಡಿದ್ದ ಜಾಮೀನಿಗೆ ಸಂಬಂಧಿಸಿದಂತೆ ಇಲ್ಲಿಯ ಬಾಲ ನ್ಯಾಯಮಂಡಳಿ (ಜೆಜೆಬಿ)ಯ ಇಬ್ಬರು ಸದಸ್ಯರನ್ನು ಮಹಾರಾಷ್ಟ್ರ ಸರಕಾರವು ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತನಿಖಾ ಸಮಿತಿಯು ಕಾರ್ಯವಿಧಾನ ಲೋಪಗಳು, ದುರ್ನಡತೆ ಮತ್ತು ನಿಯಮಾವಳಿಗಳನ್ನು ಪಾಲಿಸದ ಆರೋಪಗಳಲ್ಲಿ ಇಬ್ಬರು ಸದಸ್ಯರಾದ ಎಲ್.ಎನ್.ದನವಡೆ ಮತ್ತು ಕವಿತಾ ಥೋರಟ್ ವಿರುದ್ಧ ಕ್ರಮಕ್ಕಾಗಿ ಶಿಫಾರಸು ಮಾಡಿತ್ತು.

ಮೇ 19ರಂದು ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ಪಾನಮತ್ತನಾಗಿದ್ದ 17ರ ಹರೆಯದ ಬಾಲಕ ಪೊರ್ಷೆ ಕಾರನ್ನು ಅತಿವೇಗ ಮತ್ತು ಅಜಾಗ್ರತೆಯಿಂದ ಚಲಾಯಿಸಿ ಬೈಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು.

ಆಗಿನ ಜೆಜೆಬಿ ಸದಸ್ಯ ದನವಡೆ ಅವರು ಬಿಲ್ಡರ್ ಓರ್ವರ ಮಗನಾದ ಆರೋಪಿಗೆ ರಸ್ತೆ ಸುರಕ್ಷತೆ ಕುರಿತು 300 ಪದಗಳ ಪ್ರಬಂಧ ಬರೆಯುವುದು ಸೇರಿದಂತೆ ಅತ್ಯಂತ ಉದಾರ ಷರತ್ತುಗಳ ಮೇಲೆ ಜಾಮೀನು ನೀಡಿದ ಬಳಿಕ ಈ ಪ್ರಕರಣವು ರಾಷ್ಟ್ರೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಪ್ರಾಪ್ತ ವಯಸ್ಕ ಬಾಲಕನಿಗೆ ಜಾಮೀನು ನೀಡಿಕೆಗೆ ಸಂಬಂಧಿಸಿದಂತೆ ಇಬ್ಬರು ಜೆಜೆಬಿ ಸದಸ್ಯರ ನಡವಳಿಕೆ ಬಗ್ಗೆ ತನಿಖೆಗಾಗಿ ಸಮಿತಿಯನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News