ಮತದಾನೋತ್ತರ ಸಮೀಕ್ಷೆಗಳನ್ನು ಎರಡು ತಿಂಗಳ ಹಿಂದೆ ಮನೆಯಲ್ಲೇ ಕುಳಿತು ತಯಾರಿಸಲಾಗಿದೆ : ಮಮತಾ ಬ್ಯಾನರ್ಜಿ
ಕೋಲ್ಕತ್ತಾ : ಚುನಾವಣೋತ್ತರ ಸಮೀಕ್ಷೆಗಳು ಎರಡು ತಿಂಗಳ ಹಿಂದೆಯೇ ಮನೆಯಲ್ಲೇ ಕುಳಿತು ತಯಾರಿಸಿರುವುದರಿಂದ ಅವುಗಳಲ್ಲಿ ಯಾವುದೇ ಸ್ಥಿರತೆ ಇಲ್ಲ ಎಂದು ರವಿವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ಷೇಪಿಸಿದ್ದಾರೆ.
ಅಂತಹ ಮತದಾನೋತ್ತರ ಸಮೀಕ್ಷೆಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಪ್ರತಿಪಾದಿಸಿದ ಅವರು, ಅಂತಹ ಸಮೀಕ್ಷೆಗಳನ್ನು ಪ್ರದರ್ಶಿಸುತ್ತಿರುವ ಮಾಧ್ಯಮಗಳನ್ನು ಟೀಕಿಸಿದ್ದಾರೆ.
ಈ ಕುರಿತು ಟಿವಿ9 ಬಾಂಗ್ಲಾ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, "ನಾವು 2026, 2019 ಹಾಗೂ 2021ರಲ್ಲಿ ಚುನಾವಣೋತ್ತರ ಸಮೀಕ್ಷೆ ನಡೆಸಿರುವುದನ್ನು ನೋಡಿದ್ದೇವೆ. ಯಾವ ಸಮೀಕ್ಷೆಯೂ ನಿಜವಾಗಿಲ್ಲ" ಎಂದು ಹೇಳಿದ್ದಾರೆ.
"ಈ ಚುನಾವಣೋತ್ತರ ಸಮೀಕ್ಷೆಗಳನ್ನು ಎರಡು ತಿಂಗಳ ಹಿಂದೆಯೇ ಮಾಧ್ಯಮಗಳಿಗೆ ಉಣಿಸಲು ಮನೆಯಲ್ಲಿಯೇ ತಯಾರಿಸಲಾಗಿದೆ. ಅವುಗಳಿಗೆ ಯಾವುದೇ ಬೆಲೆ ಇಲ್ಲ" ಎಂದು ಅವರು ಕಿಡಿ ಕಾರಿದ್ದಾರೆ.
ಚುನಾವಣಾ ಸಮಾವೇಶಗಳಲ್ಲಿ ಜನರು ತೋರಿಸುತ್ತಿರುವ ಸ್ಪಂದನೆಯೊಂದಿಗೆ ಚುನಾವಣೋತ್ತರ ಸಮೀಕ್ಷೆಗಳ ಅಂದಾಜುಗಳು ಹೊಂದಾಣಿಕೆಯಾಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.