ಅಸ್ಪಶ್ಯತೆ ಆಚರಣೆಯು ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ :ಮದ್ರಾಸ್ ಹೈಕೋರ್ಟ್

Update: 2023-07-11 16:42 GMT

ಮದ್ರಾಸ್ ಹೈಕೋರ್ಟ್ | Photo: PTI 

ಹೊಸದಿಲ್ಲಿ: ಓರ್ವ ವ್ಯಕ್ತಿ ಮತ್ತು ಅವರ ಸಮುದಾಯದೊಂದಿಗಿನ ಅಸ್ಪಶ್ಯತೆ ಆಚರಣೆಯು ‘‘ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ’’ ಎಂದು ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಹೇಳಿದೆ.

ಎಮ್. ಮದಿ ಮುರುಗನ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಟಿ. ಆಶಾ ಅವರನ್ನೊಳಗೊಂಡ ವಿಭಾಗ ಪೀಠವೊಂದು ಹೀಗೆ ಉದ್ಗರಿಸಿದೆ. ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಮಂಗಳನಾಡು ಗ್ರಾಮದಲ್ಲಿರುವ ದೇವಸ್ಥಾನವೊಂದರ ಒಳಗೆ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘‘ವಸಾಹತುಶಾಹಿ ಆಳ್ವಿಕೆಯಿಂದ ದೇಶವು ಸ್ವಾತಂತ್ರವನ್ನು ಪಡೆದು 75 ವರ್ಷಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಗಮನಿಸಿದರೆ ನಾವೆಲ್ಲರೂ ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ’’ ಎಂದು ನ್ಯಾಯಾಲಯ ಹೇಳಿತು.

‘‘ಈ ದೇಶದಲ್ಲಿ ಧಾರ್ಮಿಕ ಸ್ವಾತಂತ್ರವಿದೆ ಮತ್ತು ಸಮಾನತೆಯ ಸ್ವಾತಂತ್ರವಿದೆ. ಆದರೆ ತುಳಿತಕ್ಕೊಳಗಾದ ಸಮಾಜಕ್ಕೆ ಸೇರಿದ ಅರ್ಜಿದಾರರಂಥ ವ್ಯಕ್ತಿಗಳನ್ನು ನಮ್ಮೆಲ್ಲರಿಗೂ ಸೇರಿರುವ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ತಡೆಯಲಾಗುತ್ತಿದೆ’’ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

ಮುರುಗನ್ ಮತ್ತು ಅವರ ಸಮುದಾಯದ ಸದಸ್ಯರು ಆರುಲ್ಮಿಗು ಶ್ರೀ ಮಂಗಳಾ ನಾಯಕಿ ಅಮ್ಮಾನ್ ದೇವಸ್ಥಾನ ಪ್ರವೇಶಿಸದಂತೆ ಕೆಲವರು ತಡೆಯುತ್ತಿದ್ದಾರೆ. ತಾವು ಹುಟ್ಟಿನಿಂದ ಮುರುಗನ್ ಸಮುದಾಯದ ಜನರಿಗಿಂತ ಶ್ರೇಷ್ಠರು ಎಂಬುದಾಗಿ ಅವರು ಭಾವಿಸಿದ್ದಾರೆ. ಈ ವಿಷಯ ತನಗೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಾಲಯ ದೂರವುಳಿಯುವಂತಿಲ್ಲ ಎಂದು ನ್ಯಾಯಾಧೀಶೆ ನುಡಿದರು.

‘‘ನ್ಯಾಯಾಲಯವು ಮೂಕಪ್ರೇಕ್ಷಕನಾಗಿ ಉಳಿದು ಅಸ್ಪಶ್ಯತೆ ಆಚರಣೆ ಮುಂದುವರಿಯಲು ಅವಕಾಶ ನೀಡುವಂತಿಲ್ಲ. ಹಾಗಾಗಿ, 2021 ಡಿಸೆಂಬರ್ 13ರಂದು ಉಭಯ ಪಕ್ಷಗಳ ನಡುವೆ ನಡೆದ ಶಾಂತಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು ಜಾರಿಯಾಗುವುದನ್ನು ಖಾತರಿಪಡಿಸುವಂತೆ ಎರಡನೇ ಪ್ರತಿವಾದಿಗೆ ನ್ಯಾಯಾಲಯವು ನಿರ್ದೇಶನ ನೀಡುತ್ತದೆ. ಇದರೊಂದಿಗೆ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ’’ ಎಂದು ನ್ಯಾಯಾಲಯ ಹೇಳಿತು.

ಪುದುಕೊಟ್ಟೈಯ ಅಂದಿನ ಜಿಲ್ಲಾಧಿಕಾರಿ ಕವಿತಾ ರಾಮುರನ್ನು ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿ ಹೆಸರಿಸಲಾಗಿದೆ. ಅವರ ಸ್ಥಾನದಲ್ಲಿ ಈಗ ಐ.ಎಸ್. ಮರ್ಸಿ ರಮ್ಯ ಬಂದಿದ್ದಾರೆ.

ಮಂಗಳನಾಡು ಗ್ರಾಮದ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರಿಗೆ ದೇವಸ್ಥಾನ ಪ್ರವೇಶಿಸಲು ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಕು ಎಂಬ ನಿರ್ಣಯವನ್ನು ಶಾಂತಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News