ಭಾರತೀಯ ಸೇನಾಪಡೆಗೆ ಸೇರಲಿರುವ ಪ್ರಿಡೇಟರ್ ಡ್ರೋನ್
ಹೊಸದಿಲ್ಲಿ: ವಿಶ್ವದಲ್ಲೇ ಅತ್ಯಂತ ಮಾರಕ ಮಾನವರಹಿತ ವಾಹನ (ಯುಎವಿ) ಎಂದು ಹೇಳಲಾಗಿರುವ ಎಂಕ್ಯೂ-9ಬಿ ಪ್ರಿಡೇಟರ್ ಅಥವಾ ರೀಪರ್ ಡ್ರೋನ್ ಸದ್ಯದಲ್ಲೇ ಭಾರತೀಯ ಸೇನಾಪಡೆಯ ಬತ್ತಳಿಕೆ ಸೇರಲಿದೆ ಎಂದು indiatoday.in ವರದಿ ಮಾಡಿದೆ.
ಕಳೆದ ಆರು ವರ್ಷಗಳಿಂದ ಪ್ರಿಡೇಟರ್ ಡ್ರೋನ್ ಬಗ್ಗೆ ಆಸಕ್ತಿ ತೋರಿಸಿದ್ದ ಭಾರತಕ್ಕೆ, 3.99 ಶತಕೋಟಿ ಡಾಲರ್ ಮೊತ್ತಕ್ಕೆ 31 ಪ್ರಿಡೇಟರ್ ಡ್ರೋನ್ ಗಳನ್ನು ಮಾರಾಟ ಮಾಡಲು ಗುರುವಾರ ಅಮೆರಿಕಾ ಹಸಿರು ನಿಶಾನೆ ತೋರಿದೆ. ಈ ನಿರ್ಧಾರಕ್ಕೆ ಅಮೆರಿಕಾ ಕಾಂಗ್ರೆಸ್ ನಲ್ಲಿ ಅನುಮೋದನೆ ದೊರೆತ ನಂತರ ಈ ಖರೀದಿ ಪ್ರಕ್ರಿಯೆಯ ಔಪಚಾರಿಕ ಒಪ್ಪಂದ ಏರ್ಪಡಲಿದೆ ಎಂದು ವರದಿಯಾಗಿದೆ.
31 ಪ್ರಿಡೇಟರ್ ಡ್ರೋನ್ ಗಳ ಪೈಕಿ ಭಾರತೀಯ ನೌಕಾಪಡೆಯು 15 ಸಾಗರ ರಕ್ಷಣಾ ಡ್ರೋನ್ ಗಳನ್ನು ಪಡೆಯಲಿದ್ದು, ವಾಯುಪಡೆ ಹಾಗೂ ಸೇನಾಪಡೆಯು ತಲಾ 8 ಆಕಾಶ ರಕ್ಷಣಾ ಡ್ರೋನ್ ಗಳನ್ನು ಪಡೆಯಲಿವೆ.
ಆದರೆ, ಪ್ರಿಡೇಟರ್ ಡ್ರೋನ್ ಬಳಕೆಯು ಭಾರತದ ಪಾಲಿಗೆ ಹೊಸ ಅನುಭವವೇನೂ ಅಲ್ಲ. ಪೂರ್ವ ಲಡಾಖ್ ನಲ್ಲಿ ಗಡಿ ಬಿಕಟ್ಟು ಉದ್ಭವಿಸಿದಾಗ, ಗಾಲ್ವಾನ್ ಕಣಿವೆಯಲ್ಲಿ ಭಾರತದ ಸೇನಾ ತುಕಡಿಗಳು ಹಾಗೂ ಚೀನಾದ ಸೇನಾ ಸಿಬ್ಬಂದಿಗಳೊಂದಿಗೆ ಸಂಘರ್ಷವೇರ್ಪಟ್ಟಾಗ, ಭಾರತವು ಅಮೆರಿಕಾದಿಂದ ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ಎರಡು ಎಂಕ್ಯೂ-9ಬಿ ಸಮುದ್ರ ರಕ್ಷಣಾ ಡ್ರೋಣ್ ಅನ್ನು ಪಡೆದು, ಬಳಸಿತ್ತು.
ಭಾರತವು ಗುತ್ತಿಗೆ ಪಡೆದಿದ್ದ ಡ್ರೋನ್ ಗಳನ್ನು ಹಿಂದೂ ಮಹಾಸಾಗರದಲ್ಲಿ ಚೀನಾದ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ನಿಯೋಜಿಸಲಾಗಿತ್ತು. ಇತ್ತೀಚೆಗಷ್ಟೆ ಈ ಡ್ರೋನ್ ಗಳ ಗುತ್ತಿಗೆ ಅವಧಿ ಮುಗಿದಿತ್ತು.