ಪೌರತ್ವ ತಿದ್ದುಪಡಿ ಕಾಯಿದೆಯಡಿಯಲ್ಲಿ ಅರ್ಜಿದಾರನಿಗೆ ಸ್ಥಳೀಯ ಅರ್ಚಕ ʼದೃಢೀಕರಣ ಪ್ರಮಾಣಪತ್ರʼ ನೀಡಬಹುದು: ಸರ್ಕಾರದ ಸಹಾಯವಾಣಿಯಿಂದ ಮಾಹಿತಿ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆಯಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರನ ಧರ್ಮವನ್ನು ದೃಢೀಕರಿಸಲು ಸ್ಥಳೀಯ ಪೂಜಾರಿ(ಅರ್ಚಕ) “ಅರ್ಹತಾ ಪ್ರಮಾಣಪತ್ರ” ಒದಗಿಸಬಹುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಿಎಎ ಸಹಾಯವಾಣಿ ಮೂಲಕ ಖ್ಯಾತ ಆಂಗ್ಲ ದೈನಿಕ The Hindu ಪಡೆದ ಪ್ರತಿಕ್ರಿಯೆ ತಿಳಿಸಿದೆ.
ಈ ಪ್ರಮಾಣಪತ್ರ ಒಂದು ಕಡ್ಡಾಯ ದಾಖಲೆಯಾಗಿದ್ದು ಅಫಿಡವಿಟ್ ಮತ್ತು ಇತರ ದಾಖಲೆಗಳೊಂದಿಗೆ ಅರ್ಜಿದಾರರು ಸಿಎಎ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕಿದೆ ಮತ್ತು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಕಾರಣವನ್ನೂ ನೀಡಬೇಕಿದೆ ಎಂದು ಲಭಿಸಿದ ಉತ್ತರ ತಿಳಿಸಿದೆ.
ಕೇಂದ್ರ ಸರ್ಕಾರ ಸೂಚಿಸಿದ ನಿಯಮಗಳಂತೆ ಅರ್ಹತಾ ಪ್ರಮಾಣಪತ್ರವನ್ನು ಸ್ಥಳೀಯವಾಗಿ ಖ್ಯಾತಿವೆತ್ತ ಸಮುದಾಯ ಸಂಸ್ಥೆ ನೀಡಬಹುದು ಎಂದು ಬರೆಯಲಾಗಿತ್ತು. ಈ ಕುರಿತು ಮಾಹಿತಿ ಕೋರಿದಾಗ ಈ ಪ್ರಮಾಣಪತ್ರವು ಖಾಲಿ ಹಾಳೆಯಲ್ಲಿ ಅಥವಾ ರೂ 10 ಸ್ಟ್ಯಾಂಪ್ ಮೌಲ್ಯದ ಕಾಗದಪತ್ರದಲ್ಲಿ ನೀಡಬಹುದು ಎಂಬ ಮಾಹಿತಿ ಸಹಾಯವಾಣಿಯಿಂದ ದೊರಕಿದೆ. ಯಾರು ಪ್ರಮಾಣಪತ್ರವನ್ನು ನೀಡಬಹುದು ಎಂದು ಕೇಳಿದಾಗ ಯಾವುದೇ ಸ್ಥಳೀಯ ಪೂಜಾರಿ (ಅರ್ಚಕ) ಅವರಿಗೆ ಈ ಪ್ರಮಾಣಪತ್ರ ನೀಡುವಂತೆ ಕೇಳಬಹುದು ಎಂಬ ಉತ್ತರ ಸಹಾಯವಾಣಿಯಿಂದ ಲಭಿಸಿದೆ.
ಪ್ರಮಾಣಪತ್ರ ನೀಡುವ ವ್ಯಕ್ತಿ ತನ್ನ ಹೆಸರು ಹಾಗೂ ವಿಳಾಸ ಹಾಗೂ ಕಾಯಿದೆಯಲ್ಲಿ ನಮೂದಿಸಲಾದ ಮೂರು ದೇಶಗಳ ಆರು ಸಮುದಾಯಗಳ (ಹಿಂದು/ಸಿಖ್/ ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ) ಪೈಕಿ ಒಂದಕ್ಕೆ ಸೇರಿದವರು ಎಂದು ದೃಢಪಡಿಸಬೇಕಿದೆ.