ಹೈದರಾಬಾದ್- ಬೆಂಗಳೂರು ಸೇರಿ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನಾಳೆ ಚಾಲನೆ

Update: 2023-09-23 15:57 GMT

ವಂದೇ ಭಾರತ್ ರೈಲು | Photo: PTI

ಹೊಸದಿಲ್ಲಿ: ಹನ್ನೊಂದು ರಾಜ್ಯಗಳ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸಂಪಕಿಸುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಚಾಲನೆ ನೀಡಲಿದ್ದಾರೆ. ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ್, ಪಶ್ಚಿಮಬಂಗಾಳ, ಕೇರಳ, ಒಡಿಸಾ, ಜಾರ್ಖಂಡ್ ಹಾಗೂ ಗುಜರಾತ್ ನಡುವೆ ವೇಗದ ಸಂಪರ್ಕ ಒದಗಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ನೂತನ ವಂದೇ ಭಾರತ್ ರೈಲುಗಳು ಉದಯಪುರ-ಜೈಪುರ, ತಿರುನೆಲ್ವೆಲಿ-ಮಧುರೈ-ಚೆನ್ನೈ, ಹೈದರಾಬಾದ್-ಬೆಂಗಳೂರು, ವಿಜಯವಾಡ-ಚೆನ್ನೈ (ರೇಣಿಗುಂಟ ಮೂಲಕ), ಪಾಟ್ನಾ - ಹೌರಾ, ಕಾಸರಗೋಡು-ತಿರುವನಂತಪುರ, ರೂರ್ಕೆಲಾ-ಭುವನೇಶ್ವರ-ಪುರಿ, ರಾಂಚಿ-ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವೆ ಸಂಚರಿಸಲಿದೆ.

ಈ ರೈಲುಗಳು ದೇಶಾದ್ಯಂತ ಸಂಪರ್ಕವನ್ನು ಸುಧಾರಿಸುವ ಹಾಗೂ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಅವರ ಕನಸನ್ನು ನನಸಾಗಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತಿ ವೇಗದಿಂದ ಸಂಚರಿಸಲಿದೆ. ಅಲ್ಲದೆ, ಪ್ರಯಾಣಿಕರ ಸಾಕಷ್ಟು ಸಮಯವನ್ನು ಉಳಿತಾಯ ಮಾಡಲಿದೆ ಎಂದು ಅದು ತಿಳಿಸಿದೆ.

ರೂರ್ಕೆಲಾ-ಭುವನೇಶ್ವರ-ಪುರಿ ಹಾಗೂ ಕಾಸರಗೋಡು-ತಿರುವನಂತಪುರದ ನಡುವೆ ಈಗ ಸಂಚರಿಸುತ್ತಿರುವ ವೇಗದ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ರೈಲುಗಳು ಆಯಾ ಸ್ಥಳಗಳ ನಡುವಿನ ಪ್ರಯಾಣ ಸಮಯವನ್ನು ಸುಮಾರು 3 ಗಂಟೆಗಳಷ್ಟು ಕಡಿತಗೊಳಿಸಲಿದೆ. ಹೈದರಾಬಾದ್-ಬೆಂಗಳೂರು ನಡುವೆ 2.5 ಗಂಟೆಗಳಿಗಿಂತ ಅಧಿಕ, ತಿರುನೆಲ್ವೇಲಿ-ಮಧುರೈ-ಚೆನ್ನೈ ನಡುವೆ 2 ಗಂಟೆಗೂ ಅಧಿಕ ಸಮಯ ಉಳಿತಾಯವಾಗಲಿದೆ. ರಾಂಚಿ-ಹೌರಾ, ಪಾಟ್ನಾ -ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವಿನ ಪ್ರಯಾಣದ ಸಮಯ ಈ ಸ್ಥಳಗಳ ನಡುವೆ ಸದ್ಯ ಸಂಚಾರ ನಡೆಸುತ್ತಿರುವ ರೈಲುಗಳಿಗೆ ಹೋಲಿಸಿದರೆ ಸುಮಾರು 1 ಗಂಟೆ ಕಡಿಮೆಯಾಗಲಿದೆ.

ಉದಯಪುರ-ಜೈಪುರ ನಡುವಿನ ಸಮಯ ಅರ್ಧ ಗಂಟೆ ಕಡಿಮೆಯಾಗಲಿದೆ. ರೂರ್ಕೆಲಾ-ಭುವನೇಶ್ವರ-ಪುರಿ ಹಾಗೂ ತಿರುನಲ್ವೇಲಿ-ಮಧುರೈ-ಚೆನೈ ರೈಲುಗಳು ಪುರಿ ಹಾಗೂ ಮಧುರೈಯ ಪ್ರಮುಖ ಧಾರ್ಮಿಕ ಪಟ್ಟಣಗಳನ್ನು ಸಂಪರ್ಕಿಸಲಿದೆ. ಇದಲ್ಲದೆ, ವಿಜಯವಾಡ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಪ್ರಮುಖ ಯಾತ್ರಾ ಸ್ಥಳವಾದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ. ಈ ವಂದೇ ಭಾರತ್ ರೈಲುಗಳ ಪರಿಚಯವು ದೇಶದಲ್ಲಿ ಹೊಸ ರೈಲುಗಳ ಗುಣಮಟ್ಟದ ರೈಲು ಸೇವೆಗಳಿಗೆ ನಾಂದಿ ಹಾಡಲಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News