ನಾಳೆ ವಯನಾಡಿಗೆ ಪ್ರಧಾನಿ ಭೇಟಿ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ, ಆ.10ರಂದು ಭೂಕುಸಿತ ವಯನಾಡಿಗೆ ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಬದುಕುಳಿದಿರುವವರ ಜೊತೆ ಸಂವಾದಿಸಲಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ವಿಮಾನದಲ್ಲಿ ಕಣ್ಣೂರು ತಲುಪಲಿರುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಅವರು ಕೆಲವು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಪ್ರಸ್ತುತ ಪರಿಹಾರ ಕೇಂದ್ರಗಳಲ್ಲಿ 10,000ಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದಾರೆ.
ಮೋದಿಯವರು ಕಣ್ಣೂರಿಗೆ ತಲುಪಿದ ಬಳಿಕ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆಗೂಡುವ ನಿರೀಕ್ಷೆಯಿದೆ.
ವಯನಾಡು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿವೆ.
ವಯನಾಡು ಭೂಕುಸಿತವು ಉಂಟು ಮಾಡಿರುವ ವಿನಾಶವನ್ನು ಪರಿಗಣಿಸಿ ಅದನ್ನು ರಾಷ್ಟ್ರೀಯ ವಿಪತ್ತನ್ನಾಗಿ ಘೋಷಿಸಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆಗ್ರಹಿಸಿದ ಬೆನ್ನಿಗೇ ಮೋದಿ ಭೇಟಿಯ ಪ್ರಕಟಣೆ ಹೊರಬಿದ್ದಿದೆ.