ದಿಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಖಾಲಿಸ್ತಾನ್ ಪರ ಘೋಷಣೆ; ಇಬ್ಬರ ಬಂಧನ

Update: 2023-08-31 15:49 GMT

Photo : PTI 

ಹೊಸದಿಲ್ಲಿ: ದಿಲ್ಲಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಖಾಲಿಸ್ತಾನ್ ಪರ ಗುಂಪೊಂದರ ಇಬ್ಬರು ಸದಸ್ಯರನ್ನು ದಿಲ್ಲಿ ಪೊಲೀಸ್ ನ ವಿಶೇಷ ಘಟಕವು ಬಂಧಿಸಿದೆ.

ಪಂಜಾಬಿನಿಂದ ಬಂಧಿಸಲಾಗಿರುವ ಆರೋಪಿಗಳು ‘ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯಲ್ಲಿಯ ಹಲವಾರು ಮೆಟ್ರೋ ರೈಲಿ ನಿಲ್ದಾಣಗಳ ಗೋಡೆಗಳಲ್ಲಿ ಖಾಲಿಸ್ತಾನ್ ಪರ ಗೀಚುಬರಹಗಳು ರವಿವಾರ ಕಂಡುಬಂದಿದ್ದವು.

ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ, ಪಶ್ಚಿಮ ವಿಹಾರ, ಉದ್ಯೋಗ ನಗರ, ಮಹಾರಾಜಾ ಸೂರಜಮಲ್ ಸ್ಟೇಡಿಯಂ ಮತ್ತು ನಂಗ್ಲೋಯಿ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳಲ್ಲಿ ‘ದಿಲ್ಲಿ ಖಾಲಿಸ್ತಾನ್ ಆಗಲಿದೆ’ ಮತ್ತು ‘ಖಾಲಿಸ್ತಾನ್ ರೆಫರಂಡಮ್ (ಜನಾಭಿಮತ) ಜಿಂದಾಬಾದ್’ ನಂತಹ ಘೋಷಣೆಗಳು ಕಂಡು ಬಂದಿದ್ದವು. ಈ ಎಲ್ಲ ನಿಲ್ದಾಣಗಳು ಪಶ್ಚಿಮ ದಿಲ್ಲಿಯಲ್ಲಿವೆ.

ಪೊಲೀಸ್ ಅಧಿಕಾರಿಗಳ ಪ್ರಕಾರ ಈ ಘೋಷಣೆಗಳನ್ನು ಪ್ರತ್ಯೇಕತಾವಾದಿ ಸಂಘಟನೆ ಎಸ್ಎಫ್ಜೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಸೂಚನೆಯಂತೆ ಬರೆಯಲಾಗಿತ್ತು.

ಪೊಲಿಸರು ದಿಲ್ಲಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿಯ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳನ್ನು ಗುರುತಿಸಿದ್ದಾರೆ. ನಿಷೇಧಿತ ಎಸ್ಎಫ್ಜೆ ಗುಂಪಿನ ಸದಸ್ಯರು ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಉಪಸ್ಥಿತರಿದ್ದರು ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News