ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ:ಜಾಮೀನು ರದ್ದತಿ ಕೋರಿ ಅರ್ಜಿ ; ಜಗನ್ ರೆಡ್ಡಿಗೆ ಸುಪ್ರೀಂ ನೋಟಿಸ್

Update: 2023-11-25 15:42 GMT

ಜಗನ್ ರೆಡ್ಡಿ | Photo: PTI 

ಹೊಸದಿಲ್ಲಿ: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿರುವ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿ ಅವರ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್ ಶನಿವಾರ ಕೇಳಿದೆ.

ವೈಎಸ್ಆರ್ ಕಾಂಗ್ರೆಸ್ ನ ಭಿನ್ನಮತೀಯ ಸಂಸದ ರಘು ರಾಮಕೃಷ್ಣ ರಾಜು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಪಂಕಜ್ ಮಿತ್ತಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಜಗನ್ ಮೋಹನ್ ರೆಡ್ಡಿ ಹಾಗೂ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.

ಸರ್ವೋಚ್ಚ ನ್ಯಾಯಾಲಯವು ಈ ಮೊದಲು, ಈ ಪ್ರಕರಣದ ವಿಚಾರಣೆಯನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್ ನಿಂದ ಇತರ ಯಾವುದೇ ರಾಜ್ಯಕ್ಕೆ ಅದರಲ್ಲೂ ಹೊಸದಿಲ್ಲಿಯಲ್ಲಿರುವ ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ರಾಮಕೃಷ್ಣ ರಾಜು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸಿಬಿಐ ಹಾಗೂ ರೆಡ್ಡಿಯವರಿಂದ ಪ್ರತಿಕ್ರಿಯೆಯನ್ನು ಕೋರಿತ್ತು. ಅಲ್ಲದೆ ಪ್ರಕರಣದ ತನಿಖೆ ಪೂರ್ಣಗೊಳ್ಳಲು ಯಾಕೆ ವಿಳಂಬವಾಗುತ್ತಿದೆಯೆಂದು ಅದು ಸಿಬಿಐ ಅನ್ನು ಪ್ರಶ್ನಿಸಿತ್ತು.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಜಗನ್ ಮೋಹನ್ ರೆಡ್ಡಿ ವಿರುದ್ಧ 2012ರಲ್ಲಿ ಪ್ರಕರಣ ದಾಖಲಾಗಿತ್ತು. ಸಿಬಿಐ 11 ದೋಷಾರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಿಂದಾಗಿ 11 ಪ್ರಕರಣಗಳ ವಿಚಾರಣೆಯು ಸುಪ್ರೀಂಕೋರ್ಟ್ ಮುಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News