ಮರಾಠಾ ಮೀಸಲಾತಿ ಮಹಾರಾಷ್ಟ್ರದಲ್ಲಿ ಮುಂದುವರಿದ ಪ್ರತಿಭಟನೆ

Update: 2023-09-04 14:15 GMT

Photo : PTI 

ಪುಣೆ: ಜಲ್ನಾದಲ್ಲಿ ಮರಾಠಾ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ವಿರುದ್ಧ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ವಿವಿಧ ಮರಾಠಾ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ. ಅಲ್ಲದೆ, ಶಿವಸೇನೆ-ಬಿಜಿಪಿ ಸರಕಾರಕ್ಕೆ ರಾಜೀನಾಮೆ ನೀಡುವಂತೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಆಗ್ರಹಿಸಿದ್ದಾರೆ.

ಪ್ರತಿಪಕ್ಷ ಶಿವಸೇನೆ (ಯುಬಿಟಿ), ಎನ್ಸಿಪಿ (ಶರದ್ ಪವಾರ್ ಬಣ) ಹಾಗೂ ಕಾಂಗ್ರೆಸ್ ಪುಣೆ ನಗರದ ಕೊತ್ರುಡ್ ಪ್ರದೇಶದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಮರಾಠಿ ಸಮುದಾಯದ ತಾಳ್ಮೆಯನ್ನು ಪರಿಶೀಲಿಸದಂತೆ ಎಚ್ಚರಿಕೆ ನೀಡಿತು. ಬಾರಾಮತಿಯಲ್ಲಿ ಮಾರಾಠಾ ಸಂಘಟನೆಗಳ ಸದಸ್ಯರು ಸ್ಥಳೀಯ ಎನ್ಸಿಪಿ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸರಕಾರಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸುವ ಘೋಷಣೆಗಳನ್ನು ಕೂಗಿದರು.

ಬಿಜೆಪಿಯ ನಾಯಕ ಹಾಗೂ ಇನ್ನೋರ್ವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ವಿರುದ್ಧ ಕೂಡ ಘೋಷಣೆಗಳನ್ನು ಕೂಗಿದರು. ‘‘ಏಕಾಂತ ಶಿಂಧೆ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಫಡ್ನಾವಿಸ್ ಕಳೆದ ವರ್ಷದಿಂದ ಮರಾಠಾ ಮೀಸಲಾತಿಗೆ ಪ್ರಯತ್ನಿಸುವಲ್ಲಿ ವಿಫಲವಾಗಿದ್ದಾರೆ’’ ಎಂದು ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣಕ್ಕೆ ಸೇರಿದ ಅಂಕುಶ್ ಕಾಕಡೆ ಅವರು ಪ್ರತಿಭಟನೆ ಸಂದರ್ಭ ಹೇಳಿದ್ದಾರೆ.

ಜಲ್ನಾ ಜಿಲ್ಲೆಯಲ್ಲಿ ಮರಾಠಾ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ರಾಜ್ಯ ಸರಕಾರದಿಂದ ಆದೇಶ ಸ್ವೀಕರಿಸಿದ್ದಾರೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಹಾಗೂ ಶಿವಸೇನೆ (ಯುಬಿಟಿ)ಯ ಸ್ಥಳೀಯ ನಾಯಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಜಲ್ನಾ ಜಿಲ್ಲೆಯ ಅಂತರ್ವಾಲಿ ಸಾರಥಿ ಗ್ರಾಮದಲ್ಲಿ ಶುಕ್ರವಾರ ಮರಾಠಾ ಮೀಸಲಾತಿಗೆ ಆಗ್ರಹಿಸಿ ಉಪವಾಸ ಮುಷ್ಕರ ನಡೆಸುತ್ತಿರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರತಿಭಟನಕಾರರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಈ ಘಟನೆಯಲ್ಲಿ 40 ಪೊಲೀಸ್ ಸಿಬ್ಬಂದಿ ಸಹಿತ ಹಲವರು ಗಾಯಗೊಂಡಿದ್ದರು ಹಾಗೂ ರಾಜ್ಯ ರಸ್ತೆ ಸಾರಿಗೆಯ 15ಕ್ಕೂ ಅಧಿಕ ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News